ನವದೆಹಲಿ, ಜೂ 27 (DaijiworldNews/PY): ಭಾನುವಾರ ಬೆಳಗ್ಗೆ ಜಮ್ಮು ವಾಯುಪಡೆ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಸಂಭವಿಸಿದ ಲಘುತೀವ್ರತೆಯ ಅವಳಿ ಸ್ಫೋಟಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಯುಪಡೆ ಉಪಮುಖ್ಯಸ್ಥ ಏರ್ಮಾರ್ಷಲ್ ಎಚ್.ಎಸ್.ಅರೋರಾ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಭಾರತೀಯ ವಾಯುಪಡೆ ಟ್ವೀಟ್ ಮಾಡಿದ್ದು," ಏರ್ ಮಾರ್ಷಲ್ ವಿಕ್ರಮ್ ಸಿಂಗ್ ಅವರು ಜಮ್ಮು ತಲುಪಿದ್ದು, ಪರಿಸ್ಥಿತಿ ಅವಲೋಕಿಸಲಿದ್ದಾರೆ" ಎಂದು ತಿಳಿಸಿದೆ.
ಈ ಸ್ಪೋಟಗಳು ಭಯೋತ್ಪಾದಕ ದಾಳಿಯ ಭಾಗವಾಗಿದೆಯೇ ಎನ್ನುವ ವಿಚಾರದ ಬಗ್ಗೆ ವಾಯುಪಡೆ ತನಿಖೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.
"ಭಾನುವಾರ ಬೆಳಗ್ಗೆ ಜಮ್ಮುವಿನಲ್ಲಿರುವ ವಾಯುನೆಲೆಯಲ್ಲಿ ಲಘು ತೀವ್ರತೆಯ ಎರಡು ಸ್ಪೋಟಗಳು ಸಂಭವಿಸಿವೆ. ಕಟ್ಟಡದ ಮೇಲ್ಛಾವಣಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಮತ್ತೊಂದು ಸ್ಪೋಟದಿಂದ ಕಟ್ಟಡದ ನೆಲಭಾಗಕ್ಕೆ ಹಾನಿಯಾಗಿದೆ" ಎಂದು ವಾಯಪಡೆ ಟ್ವೀಟ್ ಮೂಲಕ ತಿಳಿಸಿತ್ತು.