ನವದೆಹಲಿ, ಜೂ 27 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮನ್ ಕೀ ಬಾತ್ನಲ್ಲಿ ಅಥ್ಲೆಟಿಕ್ಸ್ ದಿಗ್ಗಜ ಹಾಗೂ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಪಡೆದಿರುವ ದಿ. ಮಿಲ್ಖಾ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು.
ಈ ವೇಳೆ ಪ್ರಧಾನಿ ಮೋದಿ ಅವರು ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭಾಶಯ ತಿಳಿಸಿದರು.
ಮನ್ ಕೀ ಬಾತ್ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, "ಒಲಿಂಪಿಕ್ ಬಗ್ಗೆ ಮಾತನಾಡುವಾಗ ನಾವ್ಯಾಕೆ ಮಿಲ್ಕಾ ಸಿಂಗ್ ಜೀ ಅವರನ್ನು ನೆನಪಿಸಿಕೊಳ್ಳುವುದಿಲ್ಲ. ಅವರು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತ್ತು. ಟೋಕಿಯೊ ಒಲಿಂಪಿಕ್ಸ್ಗೆ ಹೋಗುವ ಕ್ರೀಡಾಪಡುಗಳನ್ನು ಪ್ರೇರೆಪಿಸುವಂತೆ ನಾನು ಅವರನ್ನು ವಿನಂತಿಸಿದ್ದೆ" ಎಂದರು.
"ಒಲಿಂಪಿಕ್ ಕುರಿತು ಸಮಗ್ರವಾದ ಮಾಹಿತಿ ಇರುವ ವೆಬ್ಸೈಟ್ ಅನ್ನು ಪ್ರಾರಂಭಿಸಲಾಗುವುದು. ರೋಡ್ ಟು ಟೋಕಿಯೋ ಕ್ವಿಜ್ ಅನ್ನು ಕೂಡಾ ಆರಂಭಿಸಲಾಗುವುದು" ಎಂದು ಮಾಹಿತಿ ನೀಡಿದರು.
"ಹಳ್ಳಿಗಳಿಂದ ಅನೇಕ ಆಟಗಾರರು ಒಲಿಂಪಿಕ್ಗೆ ಬರುತ್ತಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರವೀಣ್ ಜಾಧವ್ ಅತ್ಯುತ್ತಮ ಬಿಲ್ಲುಗಾರ. ಅವರ ಪೋಷಕರು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಪ್ರವೀಣ್ ಜಾಧವ್ ಅವರು ಟೋಕಿಯೋದಲ್ಲಿ ತಮ್ಮ ಮೊದಲ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ" ಎಂದು ಹೇಳಿದರು.
ಕೊರೊನಾ ಬಿಕ್ಕಟ್ಟಿನ ಕುರಿತು ಮಾತನಾಡಿದ ಪ್ರಧಾನಿ, "ನಾವು ಕೊರೊನಾ ವಿರುದ್ದ ಹೋರಾಡುತ್ತಿದ್ದೇವೆ. ಕೆಲವು ದಿನಗಳ ಹಿಂದೆ ದೇಶವು ಅಭೂತಪೂರ್ವ ಸಾಧನೆಗೈದಿದೆ" ಎಂದರು.
ಲಸಿಕೆ ವಿಚಾರವಾಗಿ ಮಾತನಾಡಿದ ಅವರು, "ಲಸಿಕೆ ಬಗ್ಗೆ ಭಯಪಡಬೇಡಿ. ನಾನು ಎರಡು ಡೋಸ್ ಲಸಿಕೆ ಪಡೆದಿದ್ದೇನೆ. ಮೊದಲ ಡೋಸ್ ಲಸಿಕೆ ಪಡೆದುಕೊಂಡವರು ತಪ್ಪದೇ ಎರಡನೇ ಡೋಸ್ ಕೂಡಾ ಪಡೆದುಕೊಳ್ಳಿ" ಎಂದು ಮನವಿ ಮಾಡಿದರು.