ಗಂಗಾವತಿ, ಜೂ.27 (DaijiworldNews/HR): ಕೆಲವರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ಗೆ ಗುಡ್ ಬೈ ಹೇಳಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ತಾವು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಈ ಕುರಿತು ಫೇಸ್ ಬುಕ್ ಹಾಗೂ ಟ್ವಿಟರ್ ಗಳಲ್ಲಿ ಆಡಿಯೋ ಮೂಲಕ ಹೇಳಿಕೆ ನೀಡಿರುವ ಅವರು, ಕೊರೊನಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕ್ರಮದಲ್ಲಿ ತಾವು ಪಾಲ್ಗೊಂಡಿಲ್ಲ. ಇದನ್ನೇ ಇಟ್ಟುಕೊಂಡು ತಮ್ಮ ಕೆಲವು ವಿರೋಧಿಗಳು ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ತೊರೆದು ಅನ್ಯ ಪಕ್ಷ ಸೇರಲಿದ್ದಾರೆಂದು ಗಾಳಿ ಸುದ್ದಿಯನ್ನು ಹರಡುತ್ತಿದ್ದು, ಈ ಸುಳ್ಳು ಸುದ್ದಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ತಮ್ಮ ಅಭಿಮಾನಿಗಳು ಕಿವಿಗೊಡಬಾರದು" ಎಂದಿದ್ದಾರೆ.
ಇನ್ನು ಕೊರೊನಾ ಸಂದರ್ಭದಲ್ಲಿ ತಾವು ಮನೆಯಲ್ಲೇ ಇದ್ದು ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೊಡಿಸುವುದು, ಅವರಿಗೆ ಆಹಾರ ಕಿಟ್ ಗಳನ್ನು ಕೊಡಿಸುವುದು, ಆಕ್ಸಿಜನ್ ವ್ಯವಸ್ಥೆ ಮಾಡುವುದು ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳ ಮುಖಾಂತರ ಸೋಂಕಿತರಿಗೆ ನೆರವಾಗುತ್ತಿದ್ದೇನೆ. ಕೊರೊನಾ ಕಡಿಮೆಯಾದ ತಕ್ಷಣ ಗಂಗಾವತಿ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿತ ಮಾಡಿ ಪುನಃ ಅಧಿಕಾರಕ್ಕೆ ತರುವುದು ನಮ್ಮ ಉದ್ದೇಶ. ಇದಕ್ಕೆ ಕಾರ್ಯಕರ್ತರು ಅಭಿಮಾನಿಗಳು ಹೆಗಲಿಗೆ ಹೆಗಲು ಕೊಟ್ಟು ದುಡಿಯಲು ಸಿದ್ಧರಾಗಿದ್ದಾರೆ" ಎಂದು ಹೇಳಿದ್ದಾರೆ.