ನವದೆಹಲಿ, ಜೂ 27 (DaijiworldNews/PY): ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ರಾಮ ಮಂದಿರ ನಿರ್ಮಾಣ ಕುರಿತ ಟ್ರಸ್ಟ್ ಹೆಸರಿನಲ್ಲಿ ವಂಚನೆ ಎಸಗಲಾಗಿದೆ ಎಂದು ಆರೋಪಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ದಾಖಲೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಮೋಹನ್ ಭಾಗವತ್ ಅವರನ್ನು ಭೇಟಿಯಾಗಲು ಸಂಜಯ್ ಸಿಂಗ್ ಸವಯಾವಕಾಶ ಕೋರಿದ್ದಾರೆ. ರಾಮ ಮಂದಿರ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಸಾಕ್ಷ್ಯಗಳನ್ನು ನೀಡುವುದಾಗಿ ಹೇಳಿದ್ದಾರೆ.
"ರಾಮ ಮಂದಿರ ನಿರ್ಮಾಣ ಕುರಿತ ಟ್ರಸ್ಟ್ ಹೆಸರಿನಲ್ಲಿ 2 ಕೋಟಿ ರೂ. ಬೆಲೆಬಾಳುವ ಭೂಮಿಯನ್ನು 18.5 ಕೋಟಿ ರೂ. ಪಾವತಿಸಿ ಖರೀದಿ ಮಾಡಲಾಗಿದೆ" ಎಂದು ಸಂಜಯ್ ಸಿಂಗ್ ಹಾಗೂ ಅಯೋಧ್ಯೆಯ ಮಾಜಿ ಎಸ್ಪಿ ಶಾಸಕ ಪವನ್ ಪಾಂಡೆ ದೂರಿದ್ದರು.
"ವಂಚನೆ ಎಸಗಿರುವ ವಿಚಾರದ ಕುರಿತು ಹಾಗೂ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಎಲ್ಲಾ ಸೂಕ್ತ ದಾಖಲೆಗಳಿದ್ದು, ಆ ದಾಖಲೆಗಳನ್ನು ಆರ್ಎಸ್ಎಸ್ ಮುಖ್ಯಸ್ಥರು ಗಮನಿಸಿ, ಅದಕ್ಕೆ ಉತ್ತರಿಸಬೇಕು" ಎಂದು ಹೇಳಿದ್ದಾರೆ.