ಲಖನೌ, ಜೂ.27 (DaijiworldNews/HR): ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಜತೆ ಬಹುಜನ ಸಮಾಜ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿಯನ್ನು ಮಾಯಾವತಿ ತಳ್ಳಿಹಾಕಿದ್ದು, ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳದ ಜತೆ ಮಾತ್ರ ಮೈತ್ರಿ ಮಾಡಿಕೊಳ್ಳುವುದಾಗಿ ಮಾಯಾವತಿ ಹೇಳಿದರು. ಇದನ್ನು ಹೊರತುಪಡಿಸಿದರೆ, ಇನ್ನು ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ" ಎಂದಿದ್ದಾರೆ.
ಇನ್ನು "117 ವಿಧಾನಸಭಾ ಸ್ಥಾನಗಳಿರುವ ಪಂಜಾಬ್ನಲ್ಲಿ ಈಗಾಗಲೇ ಸೀಟು ಹಂಚಿಕೆಯು ನಿರ್ಧಾರವಾಗಿದ್ದು, ಶಿರೋಮಣಿ ಅಕಾಲಿದಳ 97 ಮತ್ತು ಬಿಎಸ್ಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ" ಎಂದು ತಿಳಿಸಿದರು.
ಟ್ವೀಟ್ ಮೂಲಕವು ಈಗಾಗಲೇ ಮಾಯಾವತಿ ಅವರು ಸ್ಪಷ್ಟನೆ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ ಹೊರತುಪಡಿಸಿದರೆ, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಯಾವುದೇ ಪಕ್ಷದೊಂದಿಗೆ ಬಿಎಸ್ಪಿ ಮೈತ್ರಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.