ನವದೆಹಲಿ, ಜೂ. 26(DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಏಳು ತಿಂಗಳು ಪೂರ್ಣಗೊಂಡಿದ್ದು, ಈ ವೇಳೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೇಂದ್ರ ಸರ್ಕಾರ ಮಾತುಕತೆಗೆ ಸಿದ್ಧವಿದೆ. ರೈತರು ತಮ್ಮ ಹೋರಾಟವನ್ನ ಕೈ ಬಿಡುಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಸಚಿವ ತೋಮರ್, "ರೈತರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ನಿಮ್ಮ ಮೂಲಕ ಮನವರಿಕೆ ಮಾಡಲು ಬಯಸುತ್ತೇನೆ. ದೇಶದಾದ್ಯಂತ ಸಾಕಷ್ಟು ಜನರು ಕೃಷಿ ಕಾಯ್ದೆಗಳ ಪರವಾಗಿ ಇದ್ದಾರೆ. ಕೆಲವು ರೈತರಿಗೆ ಕಾಯ್ದೆಗಳ ಬಗ್ಗೆ ಈಗಲೂ ಯಾವುದೇ ಸಮಸ್ಯೆ ಇದ್ದರೂ ಅವುಗಳನ್ನು ಆಲಿಸಲು ಮತ್ತು ಚರ್ಚಿಸಲು ಭಾರತ ಸರ್ಕಾರ ಸಿದ್ಧವಿದೆ" ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರ ಮತ್ತು ರೈತ ಸಂಘಟನೆಗಳು ಇದುವರೆಗೆ ಹನ್ನೊಂದು ಸುತ್ತಿನ ಮಾತುಕತೆ ನಡೆಸಿವೆ. ವಿವಾದವನ್ನು ಕೊನೆಗಾಣಿಸಲು ಜನವರಿ 22ರಂದು ಕೊನೆಯ ಬಾರಿಗೆ ಮಾತುಕತೆ ನಡೆದಿತ್ತು.