ಬೆಂಗಳೂರು, ಜೂ. 26(DaijiworldNews/HR): ಮಾದಕ ವಸ್ತುಗಳ ಸರಬರಾಜು ನಿಯಂತ್ರಣಕ್ಕೆ ರೂಪಿಸಲಾಗಿರುವ ಎನ್ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಸೈಕ್ಯಾಟ್ರಿಕ್ ಸಬಸ್ಟನ್ಸ್) ಕಾಯ್ದೆಗೆ ಕರ್ನಾಟಕದಲ್ಲಿ ನಿಯಮಾವಳಿ ರೂಪಿಸುವ ಮೂಲಕ ಆ ಕಾಯಿದೆಯನ್ನು ಮತ್ತಷ್ಟು ಬಲಪಡಿಸಲಾಗುವುದು. ಜೊತೆಗೆ ಮಾದಕ ವಸ್ತುಗಳ ವಿರುದ್ಧದ ನಮ್ಮ ಹೋರಾಟ ಮತ್ತಷ್ಟು ಪ್ರಬಲವಾಗಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆ ಅಂಗವಾಗಿ ಬೆಂಗಳೂರು ನಗರ ಪೊಲೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು,"ಕೇಂದ್ರ ಸರ್ಕಾರ ಎನ್ಡಿಪಿಎಸ್ ಕಾನೂನನ್ನು ರೂಪಿಸಿದ್ದು, ಈ ಕಾನೂನನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಹಾಗೂ ಮತ್ತಷ್ಟು ಗಟ್ಟಿಯಾಗಿ ಜಾರಿಗೊಳಿಸಬೇಕೆಂಬುದು ನಮ್ಮ ದೃಢ ನಿರ್ಧಾರವಾಗಿದ್ದು, ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲು ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ಆರಂಭವಾಗಿದೆ" ಎಂದರು.
ಇನ್ನು "2020 21 ನೇ ಸಾಲಿನಲ್ಲಿ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿರುವ 3000 ಕೆಜಿ ಗಿಂತಲೂ ಅಧಿಕ ತೂಕದ 50 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದ ಪ್ರಕಾರ ನಾಶಪಡಿಸಲಾಗಿದ್ದು, ಇಷ್ಟು ದೊಡ್ಡ ಪ್ರಮಾಣದ ಮಾದಕ ವಸ್ತುಗಳು ಅಪಾರ ಪ್ರಮಾಣದ ಜನರ ಆರೋಗ್ಯವನ್ನು ಹಾಳು ಮಾಡುತ್ತಿದ್ದವು. ಆ ಅಪಾಯವನ್ನು ನಮ್ಮ ಪೊಲೀಸರು ತಪ್ಪಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ" ಎಂದಿದ್ದಾರೆ.
"ಡಾರ್ಕ್ ವೆಬ್ ಮೂಲಕ ಸರಬರಾಜಾಗುತ್ತಿದ್ದ ಮಾದಕ ವಸ್ತುಗಳನ್ನು ನಮ್ಮ ಪೊಲೀಸರು ನಿಯಂತ್ರಿಸಿದ್ದು, ಡಾರ್ಕ್ ವೆಬ್ ಅಪರಾಧ ಪತ್ತೆಯಿಂದ ಹಲವಾರು ಹೊಸ ವಿಚಾರಗಳು ಬೆಳಕಿಗೆ ಬಂದಿರುವುದ ಆಧಾರದ ಮೇಲೆ ಹಲವಾರು ದಾಳಿಗಳು ನಡೆದಿವೆ. ಅಂತರಾಷ್ಟ್ರೀಯ ಮಟ್ಟದ ಪ್ಲೇಯರ್ ಗಳನ್ನು ಪತ್ತೆ ಮಾಡಿ ಬಂಧಿಸಲಾಗುವುದು" ಎಂದು ವಿಶ್ವಾಸ ವ್ಯಕ್ತಪಡಿಸಿದರು.