ಭಟ್ಕಳ, ಜೂ. 26(DaijiworldNews/HR): ಸಾಗರ ರಸ್ತೆಯ ಕೊಣಾರ ಗುಡ್ಡದ ನಿರ್ಜನ ಪ್ರದೇಶದಲ್ಲಿ ನವೆಂಬರ್ 4, 2012 ರಂದು ಮಧ್ಯಾಹ್ನ ಕಲ್ಪನಾ ಅಶೋಕ್ ಮಹಾಲೆ ಎಂಬ ಮಹಿಳೆಯನ್ನು ಸಂಶಾಯಸ್ಪದವಾಗಿ ಕೊಲೆ ಮಾಡಿದ ಆರೋಪಗಳಿಗೆ ಶಿಕ್ಷೆ ವಿಧಿಸುವಂತೆ ಸರ್ಕಾರ ಮಾಡಿದ ಮೇಲ್ಮನವಿಯನ್ನು ಧಾರವಾಡ ಉಚ್ಚ ನ್ಯಾಯಾಲಯ ವಜಾ ಮಾಡಿದೆ ಎಂದು ಆರೋಪಿಗಳ ಪರ ವಕೀಲರಾದ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಪ್ರಕರಣದ ಹಿನ್ನೆಲೆ ಮಹಿಳೆಯನ್ನು ಕೊಲೆ ಮಾಡಿ ಆಕೆಯ ಆಭರಣಗಳನ್ನು ಅಪಹರಿಸಲಾಗಿತ್ತು. ಕಾರವಾರದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 30 ಜನ ಸಾಕ್ಷಿದಾರರ ಸಾಕ್ಷ್ಯವನ್ನು ದಾಖಲಿಸಲಾಗಿತ್ತು.
ವಿಚಾರಣೆ ನಡೆಸಿದ್ದ ಅಂದಿನ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಠ್ಠಲ್ ಎಸ್ ಧಾರವಾಡಕರರು, ಆರೋಪಿಗಳಾದ ಮುಂಡಳ್ಳಿಯ ಸದಾಶಿವ ನಾಗಪ್ಪ ನಾಯ್ಕ ಹಾಗೂ ನಾಗರಾಜ ಲಚ್ಚಯ್ಯ ನಾಯ್ಕರನ್ನು ದೋಷ ಮುಕ್ತ ಗೊಳಿಸಿ ಮಾರ್ಚ್ 26, 2018 ರಂದು ತೀರ್ಪು ನೀಡಿದ್ದರು. ಅದನ್ನು ಕರ್ನಾಟಕ ಸರ್ಕಾರವು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಜಸ್ಟೀಸ್ ಆರ್ ದೇವದಾಸ್ ಹಾಗೂ ಜಸ್ಟಿಸ್ ಜೆ ಎಂ ಖಾಜೀಯವರು ಮೇಲ್ಮನವಿಯನ್ನು ವಜಾ ಮಾಡಿ ಜೂನ್ 24, 2018 ರಂದು ಕಾರವಾರದ ಸೆಷನ್ಸ್ ನ್ಯಾಯಾಧೀಶರ ತೀರ್ಪನ್ನು ಎತ್ತಿ ಹಿಡಿದಿರುತ್ತಾರೆ ಎಂದು ವಕೀಲರಾದ ರವಿಕಿರಣ್ ತಿಳಿಸಿದ್ದಾರೆ.
ಆರೋಪಿಗಳ ಪರವಾಗಿ ಅವರು ವಾದಿಸಿ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದಾರೆ.