ನವದೆಹಲಿ, ಜೂ 26 (DaijiworldNews/MS): ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರೊಂದಿಗೆ ಪೊಲೀಸ್ ಸಿಬ್ಬಂದಿಯ ಸೆಲ್ಫಿ ಸೆಷನ್ ಶುಕ್ರವಾರ ವೈರಲ್ ಆಗಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ದೆಹಲಿಯ ಮಾಂಡೋಲಿ ಜೈಲಿನಿಂದ ಸುಶೀಲ್ ಕುಮಾರ್ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳು ಕುಮಾರ್ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ದೆಹಲಿ ಸಶಸ್ತ್ರ ಪೊಲೀಸರ ವಿಶೇಷ ಸೆಲ್ ಮತ್ತು ದೆಹಲಿ ಆರ್ಮಡ್ ಪೊಲೀಸ್ನ 3 ನೇ ಬೆಟಾಲಿಯನ್ ಸ್ಥಳಾಂತರದ ಸಮಯದಲ್ಲಿ ನಿಯುಕ್ತಿಗೊಳಿಸಲಾಗಿತ್ತು.ಈ ಸಂದರ್ಭ ಸಿಬ್ಬಂದಿಗಳು ಫೋಟೋಗಳನ್ನು ತೆಗೆದು ತಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಮತ್ತು ಸಂಬಂಧಿಕರಿಗೆ ಕಳುಹಿಸಲು ಆರಂಭಿಸಿದ್ದು, ಫೋಟೋಗಳು ವೈರಲ್ ಆದವು ಎನ್ನಲಾಗಿದೆ.
ಇನ್ನು ಪೊಲೀಸ್ ಮೂಲಗಳ ಪ್ರಕಾರ " ಹೈ ರಿಸ್ಕ್ ಕೈದಿಗಳನ್ನು ಸ್ಥಳಾಂತರಿಸುವಾಗ ಆ ಪೋಟೋಗಳನ್ನುತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲು ಸೂಚಿಸಲಾಗಿದೆ. ಆದರೆ ಶುಕ್ರವಾರ, ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುವುದರ ಹೊರತಾಗಿ, ಕರ್ತವ್ಯದಲ್ಲಿರುವ ಪೊಲೀಸರು ತಮ್ಮ ಅಧಿಕೃತ ವಾಟ್ಸಾಪ್ ಗುಂಪುಗಳಲ್ಲಿ ಮತ್ತು ಅವರ ಸಂಬಂಧಿಕರೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದು ಇದರ ಪರಿಣಾಮ ವೈರಲ್ ಆಗಿದೆ"ಎಂದು ತಿಳಿದುಬಂದಿದೆ