ಬೆಳಗಾವಿ, ಜೂ 26 (DaijiworldNews/PY): "ಕಳೆದ ಸಾರಿಗೆ ಇಲಾಖೆಗೆ ಸುಮಾರು 4 ಸಾವಿರ ಕೋಟಿ ನಷ್ಟ ಉಂಟಾಗಿದೆ. 20 ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾಗೂ ಕೊರೊನಾ ಪ್ರಕರಣಗಳು ಇದಕ್ಕೆ ಮುಖ್ಯ ಕಾರಣ" ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಬೆಳಗಾವಿ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೊರೊನಾ ಸಮಸ್ಯೆ ಬಂದ ನಂತರ ಇಲಾಖೆಯ ಸಿಬ್ಬಂದಿ ಪ್ರತಿಭಟನೆ, ನಂತರ ಮತ್ತೆ ಕೊರೊನಾದ ಎರಡನೇ ಅಲೆ ಬಂದ ಕಾರಣ ಸರ್ಕಾರದಲ್ಲಿ ಹೆಚ್ಚು ನಷ್ಟ ಸಾರಿಗೆ ಇಲಾಖೆಗೆ ಆಗಿದೆ. ಇದರಿಂದ ಸಾರಿಗೆ ಇಲಾಖೆಯ ಕಾರ್ಯಾಚರಣೆ ಕುಂಟಿತವಾಗಿದೆ" ಎಂದಿದ್ದಾರೆ.
"ಸಾರಿಗೆ ಇಲಾಖೆ ನಷ್ಟ ಇದ್ದರೂ ಕೂಡಾ ಸಿಬ್ಬಂದಿಗೆ 2600 ಕೋಟಿ ಸಂಬಳ ನೀಡಲಾಗಿದೆ. ಪ್ರಸ್ತುತ ಸಾರಿಗೆಯಲ್ಲಿ ಶೇ.50ರಷ್ಟು ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುವ ಕಾರಣ ಬರುವ ಆದಾಯದಿಂದ ಸಂಬಳ ಹಾಗೂ ಇಂಧನಕ್ಕೆ ಸಾಕಾಗುತ್ತಿಲ್ಲ. ಮೂರು, ನಾಲ್ಕು ತಿಂಗಳುಗಳ ಕಾಲ ಹೆಚ್ಚು ಮಂದಿಗೆ ಪ್ರಯಾಣಿಸಲು ಅವಕಾಶವಿಲ್ಲ. ನಮ್ಮ ಸರ್ಕಾರಕ್ಕೆ ನಷ್ಟವಾದರೂ ಜನರ ಆರೋಗ್ಯ ಮುಖ್ಯ" ಎಂದು ತಿಳಿಸಿದ್ದಾರೆ.
"ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಹೊಸ ರೂಪ ಪಡೆದುಕೊಂಡಿದೆ. ಎರಡನೇ ಅಲೆಯಲ್ಲಿ ಬ್ಲ್ಯಾಕ್, ಎಲ್ಲೋ, ಗ್ರೀನ್ ಫಂಗಸ್ ಸೇರಿದಂತೆ ಅನೇಕ ಪ್ರಕರಣಗಳು ವರದಿಯಾಗಿದ್ದವು. ಮಹಾರಾಷ್ಟ್ರದಲ್ಲಿ ಇದೀಗ ಡೆಲ್ಟಾ ಪ್ಲಸ್ ಎನ್ನುವ ರೂಪಾಂತರಿ ಕೊರೊನಾ ಪ್ರಕರಣ ಪತ್ತೆಯಾಗುತ್ತಿದೆ. ಅಂತರಾಜ್ಯ ಸಾರಿಗೆ ಆರಂಭಿಸಿದ್ದೇವೆ. ಕರ್ನಾಟಕಕ್ಕೆ ಬೇರೆ ರಾಜ್ಯಗಳಿಂದ ಆಗಮಿಸುವವರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ರಿಪೋರ್ಟ್ ತರಬೇಕು" ಎಂದಿದ್ದಾರೆ.
"ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದಲ್ಲಿ ಮಾತ್ರವೇ ಗಡಿ ಪ್ರವೇಶಕ್ಕೆ ಅವಕಾಶ ಇರುತ್ತದೆ. ಬೀದರ್, ಗುಲ್ಬರ್ಗಾ ಬೆಳಗಾವಿ ಜಿಲ್ಲೆಗೆ ಮಹಾರಾಷ್ಟ್ರದ ಹೆಚ್ಚು ಸಂಪರ್ಕ ಇರುವುದರಿಂದ ಅಂತ ಗಡಿಗಳಲ್ಲಿ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಎಂದು ಡಿಸಿಗಳಿಗೆ ಸೂಚನೆ ನೀಡಿದ್ದೇವೆ. ಬೆಳಗಾವಿ ಜಿಲ್ಲೆಯ ಅಥಣಿ, ನಿಪ್ಪಾಣಿ, ಕಾಗವಾಡ ಗಡಿಗಳಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದೇವೆ. ಮೂರನೇ ಅಲೆಗೆ ಈಗಿಂದಲೇ ಜಾಗೃತಿ ವಹಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಜುಲೈ 5ರ ಬಳಿಕ ಸಾರಿಗೆ ಇಲಾಖೆಯ ಸಿಬ್ಬಂದಿಯಿಂದ ಮತ್ತೆ ಮುಷ್ಕರ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಹಿಂದೆ ಸಾರಿಗೆ ಇಲಾಖೆ ಸಿಬ್ಬಂದಿಗೆ ಲೋಪ ಮಾಡಿರುವುದು ಗೊತ್ತಿದೆ. ಅವರ ಹುನ್ನಾರಕ್ಕೆ ನಾವು ಒಳಗಾಗಿದ್ದೆವು ಎನ್ನುವುದು ಸಾರಿಗೆ ಸಿಬ್ಬಂದಿಗೆ ತಿಳಿದಿದೆ. ಸರ್ಕಾರದ ಅಭಿವೃದ್ದಿ ಸಹಿಸಲು ಆಗದ ಪಟ್ಟಭದ್ರ ಹಿತಾಸಕ್ತಿಗಳು ಹುನ್ನಾರ ನಡೆಸಿದ್ದು, ಇದನ್ನು ಯಾರು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಅದು ನಿಮಗೆ ತಿಳಿಯಲಿದೆ" ಎಂದು ತಿಳಿಸಿದ್ದಾರೆ.