ಬೆಂಗಳೂರು, ಜೂ 26 (DaijiworldNews/PY): "ನಾವು ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ದರಾಗಬೇಕು. ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ನಾವು ಸನ್ನದ್ದರಾಗಬೇಕು" ಎಂದು ಪಕ್ಷದ ಮುಖಂಡರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, "ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಳೆಯಿಂದ ಉಂಟಾದ ಪ್ರವಾಹ, ಕೊರೊನಾ ಪರಿಸ್ಥಿತಿ ಹಾಗೂ ಉಪ ಚುನಾವಣೆಗಳನ್ನು ಸಮರ್ಥವಾಗಿ ನಿಭಾಯಿಸಿದೆ" ಎಂದರು.
"ಲಾಕ್ಡೌನ್ ಅನ್ನು ಹಂತ ಹಂತವಾಗಿ ಅನ್ಲಾಕ್ ಮಾಡುವ ಮುಖೇನ ಜನ ಸಾಮಾನ್ಯರ ಜೀವನಕ್ಕೆ ಅನುವು ಮಾಡಿಕೊಡಲಾಗಿದೆ. ರಾಜ್ಯದಲ್ಲಿ ನಡೆದ ಲಸಿಕಾ ಉತ್ಸವ ಯಶಸ್ವಿಯಾಗಿದ್ದು, ಇದೊಂದು ಐತಿಹಾಸಿಕ ದಾಖಲೆಯಾಗಿದೆ. ಲಸಿಕೆ ನೀಡಿಕೆಯಲ್ಲಿ ರಾಜ್ಯ ರಾಷ್ಟ್ರದಲ್ಲಿ ಎರಡನೇ ಸ್ಥಾನದಲ್ಲಿರುವುದು ಖುಷಿಯ ವಿಚಾರ" ಎಂದು ತಿಳಿಸಿದರು.
"ಕೊರೊನಾ ಸಾಂಕ್ರಾಮಿಕದಿಂದ ಆರ್ಥಿಕತೆ ಮೇಲೆ ವ್ಯತಿರಿಕ್ತವಾರ ಪರಿಣಾಮ ಬೀರಿದೆ. ಹೀಗಿದ್ದರೂ, ಕೊರೊನಾದಿಂದ ಮೃತಪಟ್ಟವರಿಗೆ ಒಂದು ಲಕ್ಷ ಪರಿಹಾರ ಆರ್ಥಿಕ ಸಂಕಷ್ಟಕ್ಕೊಳಗಾದವರಿಗೆ ಪರಿಹಾರ ಸೇರಿದಂತೆ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಬಾಲಸೇವೆ ಯೋಜನೆ ಜಾರಿಗೆ ತಂದಿದ್ದೇವೆ. ಸರ್ಕಾರವು ಕೇಂದ್ರದ ಸಹಕಾರದೊಂದಿಗೆ ಕೊರೊನಾ ನಿರ್ವಹಣೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ" ಎಂದು ಹೇಳಿದರು.
ಸಭೆಯಲ್ಲಿ ಪಕ್ಷ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖಂಡರು ಭಾಗವಹಿಸಿದ್ದರು. ಉಸ್ತುವಾರಿ ಅರುಣ್ ಸಿಂಗ್ ಅವರು ದೆಹಲಿಯಿಂದ ವರ್ಚುವಲ್ ಮೂಲಕ ಪಾಲ್ಗೊಂಡರು.