ಬೆಂಗಳೂರು, ಜೂ 26 (DaijiworldNews/PY): ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ವಿರುದ್ದ ನಟ ಚೇತನ್ ಸಿಟಿ ಸಿವಿಲ್ ಕೋರ್ಟ್ನಲ್ಲಿ 1 ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಶಿವರಾಂ ಹೆಬ್ಬಾರ್ ವಿರುದ್ದ ಚೇತನ್ ಮೊಕದ್ದಮೆ ಹೂಡಿದ್ದಾರೆ.
ಕನ್ನಡ ಚಿತ್ರರಂಗಗಳಲ್ಲಿ ನಟಿಸುತ್ತಿರುವ ಚೇತನ್ ಎನ್ನುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ಗಮನಕ್ಕೆ ಬಂದಿತು. ಮೊದಲಿಗೆ, ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಚಿವ ಶಿವರಾಮ್ ಹೆಬ್ಬಾರ್ ಟ್ವೀಟ್ ಮಾಡಿದ್ದರು.
ಇನ್ನು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹದು. ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜೀ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದರು.
ಇದರಿಂದ ನನ್ನ ತೇಜೋವಧೆ ಆಗಿದೆ ಎಂದು ಆರೋಪಿಸಿ ನಟ ಚೇತನ್ ನಗರದ ಸಿಟಿ ಸಿವಿಲ್ ಕೋರ್ಟ್ನಲ್ಲಿ ಮಾನನಷ್ಟ ದಾವೆ ಹೂಡಿದ್ದಾರೆ.
ನಟ ಚೇತನ್ ಹೂಡಿರುವಂತ ಮಾನನಷ್ಟ ಮೊಕದ್ದಮೆಯ ದೂರಿನ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್ನ ನ್ಯಾಯಾಧೀಶರು, ಸಚಿವರಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಜುಲೈ 4ಕ್ಕೆ ವಿಚಾರಣೆ ಮುಂದೂಡಿದ್ದಾರೆ.