ಮುಂಬೈ, ಜೂ 26 (DaijiworldNews/MS): ಬಹುಕೋಟಿ ಲಂಚ ಮತ್ತು ಸುಲಿಗೆ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದ್ದ ಲಂಚ ಮತ್ತು ಸುಲಿಗೆ ಆರೋಪದಲ್ಲಿ ಅಂದಿನ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಶುಕ್ರವಾರ ಬೆಳಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಾಗ್ಪುರ, ಮುಂಬೈನ ವರ್ಲಿ ಮತ್ತು ಮಲ್ಬಾರ್ನಲ್ಲಿರುವ ದೇಶಮುಖ್ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಅದಾದ ಬಳಿಕ ಅನಿಲ್ ದೇಶಮುಖ್ ರ ಇಬ್ಬರು ಆಪ್ತರನ್ನು ಶುಕ್ರವಾರ ಬಂಧಿಸಿದೆ. ಖಾಸಗಿ ಸಹಾಯಕ ಕುಂದನ್ ಶಿಂಧೆ ಮತ್ತು ವೈಯಕ್ತಿಕ ಕಾರ್ಯದರ್ಶಿ ಸಂಜೀವ ಪಾಲಂದೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಅರೆಸ್ಟ್ ಮಾಡಿದ್ದು, ಇವರಿಬ್ಬರನ್ನು ಶನಿವಾರ ವಿಶೇಷ ಕೋರ್ಟ್ಗೆ ಹಾಜರುಪಡಿಸಲಿದೆ.
ಬಲ್ಲಾರ್ಡ್ ಎಸ್ಟೇಟ್ನಲ್ಲಿರುವ ಇ.ಡಿ ಕಚೇರಿಗೆ 11 ಗಂಟೆಗೆ ಆಗಮಿಸುವಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅನಿಲ್ ದೇಶಮುಖ್ ಅವರಿಗೆ ಸಮನ್ಸ್ನಲ್ಲಿ ತಿಳಿಸಲಾಗಿದೆ. ಸದ್ಯ ಅನಿಲ್ ದೇಶಮುಖ್ರನ್ನು ಬಂಧಿಸಲು ಅಗತ್ಯವಿರುವಷ್ಟು ಸಾಕ್ಷಿ ಇ.ಡಿ. ಬಳಿ ಇದೆ ಎನ್ನಲಾಗುತ್ತಿದೆ.