ಮುಂಬೈ, ಜೂ 26 (DaijiworldNews/MS): ಗೋವಾಕ್ಕೆ ಪ್ರಯಾಣಿಸುತ್ತಿದ್ದ ಹಜರತ್ ನಿಜಾಮುದ್ದೀನ್ನ ರಾಜಧಾನಿ ಎಕ್ಸ್ಪ್ರೆಸ್ ರೈಲು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸುರಂಗವೊಂದರಲ್ಲಿ ಶನಿವಾರ ಹಳಿ ತಪ್ಪಿದೆ. ಆದರೆ, ಯಾವುದೇ ಸಾವು-ನೋವಿನ ವರದಿಯಾಗಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮುಂಜಾನೆ 4.15 ರ ರ ವೇಳೆಗೆ ಮಡ್ಗಾಂವ್ನತ್ತ ಪ್ರಯಾಣಿಸುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್-02414 ರೈಲು ಮುಂಬೈಯಿಂದ ಸುಮಾರು 325 ಕಿ.ಮೀ ದೂರದಲ್ಲಿರುವ ಕಾರ್ಬುಡೆ ಸುರಂಗದೊಳಗೆ ಹಳಿ ತಪ್ಪಿದೆ ಎಂದು ಕೊಂಕಣ್ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.
'ರೈಲ್ವೆ ಹಳಿಯ ಮೇಲೆ ಬಂಡೆಯೊಂದು ಬಿದ್ದ ಕಾರಣ, ರೈಲಿನ ಮೊದಲ ಚಕ್ರವು ಹಳಿ ತಪ್ಪಿದೆ. ಕೊಂಕಣ ರೈಲ್ವೆಯ ರತ್ನಾಗಿರಿ ಪ್ರದೇಶದ ಉಕ್ಷಿ ಮತ್ತು ಭೋಕ್ ನಿಲ್ದಾಣಗಳ ನಡುವೆ ಇರುವ ಕಾರ್ಬುಡೆ ಸುರಂಗದಲ್ಲಿ ರಾಜಧಾನಿ ಸೂಪರ್ಫಾಸ್ಟ್ ರೈಲಿನ ಲೋಕೋಮೋಟಿವ್ನ ಮುಂಭಾಗದ ಚಕ್ರ ಹಳಿ ತಪ್ಪಿದೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರೈಲ್ವೆ ನಿರ್ವಹಣಾ ವಾಹನ (ಆರ್ಎಂವಿ) ಸ್ಥಳಕ್ಕೆ ತಲುಪಿದ್ದುಇದರೊಂದಿಗೆ ಕೊಂಕಣ ರೈಲ್ವೆ ಅಧಿಕಾರಿಗಳೂ ಸಹ ಮಾರ್ಗವನ್ನು ತೆರವುಗೊಳಿಸಲು ಸ್ಥಳಕ್ಕೆ ಧಾವಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
ಕೊಂಕಣ ರೈಲ್ವೆ ಮುಂಬೈ ಬಳಿಯ ರೋಹಾ ಮತ್ತು ಮಂಗಳೂರು ಬಳಿಯ ತೋಕೂರ್ ನಡುವೆ 756 ಕಿ.ಮೀ ಉದ್ದದ ಮಾರ್ಗವನ್ನು ನಿರ್ವಹಿಸುತ್ತದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಎಂಬ ಮೂರು ರಾಜ್ಯಗಳಲ್ಲಿ ಹರಡಿರುವ ಈ ಮಾರ್ಗವು ಅನೇಕ ನದಿಗಳು, ಕಮರಿಗಳು ಮತ್ತು ಪರ್ವತಗಳನ್ನು ಹೊಂದಿರುವ ಸವಾಲಿನ ಭೂಪ್ರದೇಶಗಳಲ್ಲಿ ಒಂದಾಗಿದೆ.