ಬೆಂಗಳೂರು, ಜೂ 26 (DaijiworldNews/PY): ಛಲವಾದಿಪಾಳ್ಯ ವಾರ್ಡ್ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಸ್ಪೀಫನ್ (21), ಅಜಯ್ (21) ಹಾಗೂ ಪುರುಷೋತ್ತಮ್ನನ್ನು (22) ಎಂದು ಗುರುತಿಸಲಾಗಿದೆ.
ರೇಖಾ ಕದಿರೇಶ್ ಹತ್ಯೆಯ ಪ್ರಮುಖ ಆರೋಪಿಗಳಾದ ಪೀಟರ್ (46) ಹಾಗೂ ಸೂರ್ಯ (19) ಅವರನ್ನು ಶುಕ್ರವಾರ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದರು.
ಆರೋಪಿ ಪೀಟರ್ ಹಾಗೂ ಸೂರ್ಯ, ರೇಖಾ ಅವರಿಗೆ ಮಾರಾಕಾಸ್ತ್ರಗಳಿಂದ ಹೊಡೆದು, ಚಾಕುವಿನಿಂದ ಕತ್ತು ಕೊಯ್ದಿದ್ದರು. ರೇಖಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹೊಡೆಯುತ್ತಿರುವ ಸಂದರ್ಭ ಆರೋಪಿಗಳನ್ನು ತಡೆಯಲು ಬಂದಿದ್ದ ಸಾರ್ವಜನಿಕರ ಮೇಲೆ ಸ್ಟೀಫನ್ ಹಾಗೂ ಅಜಯ್ ಹಲ್ಲೆ ಮಾಡಿದ್ದರು. ಹಲ್ಲೆ ನಡೆಸುವ ಮುನ್ನ ಆರೋಪಿ ಪುರುಷೋತ್ತಮ್ ಸಿಸಿಟಿವಿ ಕ್ಯಾಮೆರಾವನ್ನು ತಿರುಗಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಕಿಟ್ ವಿತರಿಸಲು ತೆರಳಿದ್ದಂತ ಮಾಜಿ ಕಾರ್ಪೋರೇಟ್ ರೇಖಾ ಕದಿರೇಶ್ ಅವರನ್ನು, ಜೂನ್ 24ರಂದು ಭೀಕರವಾಗಿ ಕೊಚ್ಚಿ ಹತ್ಯೆಗೈದಿದ್ದರು. 2018ರ ಫೆಬ್ರವರಿ 8ರಂದು ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಅವರ ಪತಿ, ಕದಿರೇಶ್ ಅವರನ್ನು ಶೋಭನ್ ಅಂಡ್ ಗ್ಯಾಂಗ್ ಕೊಚ್ಚಿ ಹತ್ಯೆ ಮಾಡಿತ್ತು.