ಬೆಂಗಳೂರು, ಜೂ 26 (DaijiworldNews/PY): ಜೂನ್ 28ರ ಸೋಮವಾರದಿಂದ ವಿವಾಹ ಸಮಾರಂಭ ನಡೆಸಲು ಷರತ್ತುಬದ್ದ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, 40 ಮಂದಿಗೆ ಭಾಗವಹಿಸಲು ಸೂಚನೆ ನೀಡಲಾಗಿದೆ.
ಜೂನ್ 25ರ ಶುಕ್ರವಾರದಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ, ವಿವಾಹ ಸಮಾರಂಭಗಳಿಗೆ ಷರತ್ತುಬದ್ಧ ಸನುಮತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೆಲವು ಷರತ್ತುಗಳನ್ನು ಉಲ್ಲೇಖಿಸಿದ್ದು, ಅದರ ಪ್ರಕಾರ ಜೂನ್ 28ರಿಂದ ವಿವಾಹ ಕಾರ್ಯಕ್ರಮಗಳಳಿಗೆ ಅನುಮತಿ ನೀಡಲಾಗಿದೆ.
ಸ್ಥಳೀಯ ಆಡಳಿತದಿಂದ ವಿವಾಹ ನಡೆಸಲು ಪೂರ್ವಾನುಮತಿ ಪಡೆದುಕೊಳ್ಳಬೇಕು. ಇದರೊಂದಿಗೆ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಪಾಸ್ ಹೊಂದಿರಬೇಕು. ರೆಸಾರ್ಟ್ ಸೇರಿದಂತೆ ಪಾರ್ಟಿ ಹಾಲ್, ಕಲ್ಯಾಣ ಮಂಟಪ ಹಾಗೂ ಹೋಟೆಲ್ನಲ್ಲಿ ವಿವಾಹ ಸಮಾರಂಭಕ್ಕೆ ಅನುಮತಿ ನೀಡಿದ್ದು, ಕೇವಲ 40 ಮಂದಿಗೆ ಪಾಲ್ಗೊಳಲು ಸೂಚನೆ ನೀಡಲಾಗಿದೆ.
ರಾಜ್ಯ ಸರ್ಕಾರವು ಜೂನ್ 21ರ ಬಳಿಕ ಲಾಕ್ಡೌನ್ ನಿಯಾಮವಳಿಗಳ ಪೈಕಿ ಹಲವು ಸಡಿಲಿಕೆಗಳನ್ನು ಮಾಡಿತ್ತು. 19 ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆ ಮಾಡಿದ್ದು, ವಾರಾಂತ್ಯ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಮುಂದುವರಿಸಲಾಗಿದೆ.