ಪಟ್ನಾ , ಜೂ 26 (DaijiworldNews/MS): ಒಂದೆಡೆ ದೇಶಾದ್ಯಂತ ವ್ಯಾಕ್ಸಿನ್ ಡ್ರೈವ್ ಭರದಿಂದ ಸಾಗಿದೆ. ಇನ್ನೊಂದೆಡೆ ಲಸಿಕೆ ನೀಡುವಾಗ ಆಗುವ ಅವಾಂತರಗಳು ಕೆಲವೊಂದೆಡೆ ವರದಿಯಾಗುತ್ತಿದೆ .ಬಿಹಾರದಲ್ಲಿ ಲಸಿಕೆ ಪಡೆಯಲು ಬಂದಿದ್ದ ಯುವಕನಿಗೆ ನರ್ಸ್ವೊಬ್ಬರು ಖಾಲಿ ಸಿರಿಂಜ್ ವೊಂದನ್ನು ಚುಚ್ಚಿ ಕಳುಹಿಸಿದ ಘಟನೆಯ ವೀಡಿಯೋ ವೈರಲ್ ಆಗಿದೆ.
ಜೂನ್ 21 ರಂದು ಬಿಹಾರದ ಚಪ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಿಕ್ಕಿರಿದ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಸುತ್ತಲಿದ್ದವರ ಜತೆ ಮಾತನಾಡುವುದರಲ್ಲೇ ನಿರತರಾಗಿದ್ದ ನರ್ಸ್, ಸಿರಿಂಜ್ ಪ್ಯಾಕೆಟ್ ತೆರೆದು ವ್ಯಾಕ್ಸಿನ್ ಭರ್ತಿ ಮಾಡಿಕೊಳ್ಳದೇ ನರ್ಸ್ ಖಾಲಿ ಸಿರಿಂಜ್ ಅಜಹರ್ ಎಂಬ ಯುವಕನಿಗೆ ಚುಚ್ಚಿದ್ದಾರೆ.
ಅಜಹರ್ ನ ಸ್ನೇಹಿತ, ಲಸಿಕೆಚುಚ್ಚುವುದನ್ನು ತಮಾಷೆಗಾಗಿ ವೀಡಿಯೋ ಮಾಡಿಕೊಂಡಿದ್ದ. ಮನೆಗೆ ಮರಳಿದ ಬಳಿಕ ಆ ವೀಡಿಯೋವನ್ನು ಪರಿಶೀಲಿಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.
"48 ವರ್ಷದ ನರ್ಸ್, ಚಂದಾ ಕುಮಾರಿ ಅವರಿಗೆ ವಿವರಣೆ ನೀಡುವಂತೆ ಶೋ-ಕಾಸ್ ನೋಟಿಸ್ ನೀಡಲಾಗಿದೆ. ಕಿಕ್ಕಿರಿದ ಕೇಂದ್ರದಲ್ಲಿ ತರಾತುರಿಯಲ್ಲಿ ವರ್ತಿಸಿದ್ದಾರೆಂದು ತೋರುತ್ತದೆ. ಉದ್ದೇಶಪೂರ್ವಕವಾಗಿ ಈ ತಪ್ಪನ್ನು ಮಾಡಿಲ್ಲ" ಎಂದು ಡಿಐಒ ಡಾ.ಅಜಯ್ ಕುಮಾರ್ ಅವರು ಘಟನೆ ಬಗ್ಗೆ ಮಾಧ್ಯಮವೊಮ್ದಕ್ಕೆ ಪ್ರತಿಕ್ರಿಯಿಸಿದ್ದಾರೆ.