ಶಿವಮೊಗ್ಗ, ಜೂ 25 (DaijiworldNews/PY): "ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಅವರು ಈಗ ಪುನಃ ಸಚಿವ ಸ್ಥಾನಕ್ಕೆ ಪ್ರಯತ್ನ ಪಟ್ಟರೆ ತಪ್ಪೇನಿದೆ? ರಾಜಕಾರಣದಲ್ಲಿ ಯಾರೂ ಕೂಡಾ ಸನ್ಯಾಸಿಗಳಲ್ಲ" ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಚಿವ ಸ್ಥಾನಕ್ಕೆ ಪ್ರಯತ್ನ ಪಡುತ್ತಿರಬಹುದು. ಆರೆ, ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೋ, ಇಲ್ಲವೋ ಎನ್ನುವುದು ಕೇಂದ್ರ ನಾಯಕರು ಹಾಗೂ ಸಿಎಂ ಅವರಿಗೆ ಬಿಟ್ಟ ವಿಚಾರವಾಗಿದೆ" ಎಂದು ತಿಳಿಸಿದ್ದಾರೆ.
"ಸುಮ್ಮನೆ ಯಾರೂ ಕೂಡಾ ರಾಜಕಾರಣಕ್ಕೆ ಬರುವುದಿಲ್ಲ. ರಾಜಕಾರಣಕ್ಕೆ ಬರುವುದೇ ಸ್ಥಾನಮಾನ ಪಡೆಯುವ ಸಲುವಾಗಿ. ಯಾರೂ ಕೂಡಾ ರಾಜಕೀಯದಲ್ಲಿ ಸನ್ಯಾಸಿಗಳಲ್ಲ. ಹಾಗಾಗಿ ರಮೇಶ್ ಜಾರಕಿಹೊಳಿ ಅವರು ಮತ್ತೆ ಸಚಿವ ಸ್ಥಾನಕ್ಕೆ ಪ್ರಯತ್ನ ಪಡುವುದರಲ್ಲಿ ತಪ್ಪೇನು?" ಎಂದು ಕೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸುತ್ತೂರು ಮಠಕ್ಕೆ ಭೇಟಿ ನೀಡಿರುವ ಬಗ್ಗೆ ಯಾವುದೇ ರೀತಿಯಾದ ಉದ್ದೇಶವಿಲ್ಲ. ಯಾರೂ ಬೇಕಾದರೂ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಳ್ಳಬಹುದು. ಅವರು ಸಚಿವ ಆಗಲು ಮಠಕ್ಕೆ ಭೇಟಿ ನೀಡಿಲ್ಲ. ಬದಲು ಸ್ವಾಮೀಜಿಗಳ ಅಶೀರ್ವಾದ ಪಡೆಯಲು ಮಠಕ್ಕೆ ಹೋಗಿದ್ಧಾರೆ. ಮಠಕ್ಕೆ ಭೇಟಿ ನೀಡಿದರೆ ಸಚಿವ ಸ್ಥಾನ ಸಿಗುತ್ತದೆ ಎಂದಾದಲ್ಲಿ ರಾಜಕಾರಣಿಗಳು ಎಲ್ಲಾ ಮಠಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು" ಎಂದಿದ್ದಾರೆ.