ನವದೆಹಲಿ, ಜೂ 25 (DaijiworldNews/PY): ಚುನಾವಣೆ ನಡೆಸಿದ ಬಳಿಕ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲು ಕೇಂದ್ರ ಬಯಸುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟೀಕಾಪ್ರಹಾರ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕಾಂಗ್ರೆಸ್, ಇತರ ಪಕ್ಷಗಳು ಹಾಗೂ ನಾಯಕರು ಜಮ್ಮು-ಕಾಶ್ಮೀರಕ್ಕೆ ಮೊದಲು ರಾಜ್ಯದ ಸ್ಥಾನಮಾನ ಸಿಗಲಿ. ಬಳಿಕ ಚುನಾವಣೆ ನಡೆಯಲಿ ಎಂದು ಬಯಸುತ್ತಿದ್ದಾರೆ" ಎಂದಿದ್ದಾರೆ.
"ರಾಜ್ಯಾಡಳಿತ ಚುನಾವಣೆ ನಡೆಸಬೇಕು. ಅಂತಹ ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿರುತ್ತವೆ. ಆದರೆ, ಸರ್ಕಾರ ಏಕೆ ಕುದುರೆ ಬಂಡಿ ಎಳೆಯುತ್ತಿದೆ. ಇದು ವಿಲಕ್ಷಣವಾಗಿದೆ" ಎಂದಿದ್ದಾರೆ.
ಗುರುವಾರ ಪ್ರಧಾನಿ ಮೋದಿ ಅವರೊಂದಿಗೆ ಜಮ್ಮು-ಕಾಶ್ಮೀರದ ಸರ್ವಪಕ್ಷಗಳ ಮುಖಂಡರ ಸಭೆ ನಡೆದಿದ್ದು, ಜಮ್ಮು- ಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳ 14 ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
"ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ಅಭಿವೃದ್ದಿಗೆ ಬದ್ದವಾಗಿದೆ. ಅಲ್ಲಿ ಚುನಾವಣೆ ನಡೆಯಬೇಕು. ಶಾಂತಿಯುತವಾದ ಚುನಾವಣೆಯು, ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ನಡೆಸಲು ಹಾಗೂ ಸಂವಿಧಾನಕ್ಕೆ ಬದ್ಧವಾಗಿರಲು ಒಪ್ಪಿಗೆ ಸೂಚಿಸಿದ್ದಾರೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರು.