ಮೈಸೂರು, ಜೂ.25 (DaijiworldNews/HR): "ಸರ್ಕಾರ ಬೀಳಿಸಿ ಮತ್ತೆ ರಚಿಸುವ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ಇಂತಹ ನಾನು ಸಚಿವನಾಗುವುದಕ್ಕೆ ಲಾಬಿ ಮಾಡುತ್ತೇನಾ? ನನಗೆ ಇನ್ನೂ ಆ ಸ್ಥಿತಿ ಬಂದಿಲ್ಲ" ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸುತ್ತೂರು ಶ್ರೀಗಳನ್ನು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸ್ವಾಮೀಜಿ ಅವರ ಬಳಿ ಬಂದು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸುವ ಸ್ಥಿತಿಗೆ ನಾನು ಬಂದಿಲ್ಲ. ನಾನು ಸ್ವಾಮೀಜಿ ಬಳಿ ಬಂದದ್ದು ಅವರ ಪೂರ್ವಾಶ್ರಮದ ಮಾತೃಶ್ರೀ ನಿಧನಕ್ಕೆ ಸಂತಾಪ ಸೂಚಿಸಲು ಅಷ್ಟೆ. ಇಲ್ಲಿ ಯಾವ ರಾಜಕಾರಣವನ್ನೂ ಚರ್ಚೆ ಮಾಡಿಲ್ಲ. ಇನ್ನೊಬ್ಬರನ್ನು ಸಚಿವನನ್ನಾಗಿ ಮಾಡುವ ಶಕ್ತಿ ನನ್ನಲ್ಲಿದೆ. ನಾನು ಸಚಿವನಾಗೋಕೆ ಲಾಬಿ ಮಾಡುತ್ತೇನಾ?ಇರುವ ಶಾಸಕ ಸ್ಥಾನವನ್ನೇ ಬಿಡುವ ಚಿಂತನೆ ಮಾಡಿದ್ದವನು ನಾನು" ಎಂದಿದ್ದಾರೆ.
"ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ. ಆದರೆ ಕೆಲವು ಹಿರಿಯರ ಸಲಹೆ ಮೇರೆಗೆ ಆ ನಿರ್ಧಾರವನ್ನು ಕೈಬಿಟ್ಟಿರುವೆ. ನಾನು ಮನಸ್ಸು ನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ ಎಂದು ಮತ್ತೆ ಪುನರುಚ್ಚಿಸಿದ್ದಾರೆ.
ಇನ್ನು "ರಾಜೀನಾಮೆ ಕೊಟ್ಟರೂ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು. ನಾನೇಕೆ ಆ ಪಕ್ಷಕ್ಕೆ ಹೋಗಲಿ? ಬಿಜೆಪಿ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. ನಾನು ಬಿಜೆಪಿಗೆ ದ್ರೋಹ ಮಾಡುವ ಕೆಲಸ ಎಂದಿಗೂ ಮಾಡೋದಿಲ್ಲ" ಎಂದು ಹೇಳಿದ್ದಾರೆ.