ಬೆಂಗಳೂರು, ಜೂ.25 (DaijiworldNews/HR): ನಗರದ ಛಲವಾದಿಪಾಳ್ಯ ವಾರ್ಡ್ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಆರೋಪಿಗಳು ಎನ್ನಲಾಗಿರುವ ಪೀಟರ್ ಹಾಗೂ ಸೂರ್ಯನನ್ನು ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಪಶ್ಚಿಮ ವಿಭಾಗದ ಪೊಲೀಸರು ಹತ್ಯೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ನಾಲ್ವರನ್ನು ವಶಕ್ಕೆ ಪಡೆದಿದ್ದು, ಅವರು ನೀಡಿದ್ದ ಮಾಹಿತಿ ಆಧರಿಸಿ ಪ್ರಮುಖ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದರು.
ಇನ್ನು ತನಿಖೆ ಮುಂದುವರೆಸಿದ ಕಾಟನ್ ಪೇಟೆ ಹಾಗೂ ಉಪ್ಪಾರಪೇಟೆ ಇನ್ಸ್ಪೆಕ್ಟರ್ ನೇತೃತ್ವದ ತಂಡ, ಪೀಟರ್ ಹಾಗೂ ಸೂರ್ಯ ಬಂಧಿಸಲು ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಗೆ ಹೋಗಿದ್ದು, ಈ ವೇಳೆ ಪಿಎಸ್ಐ, ಕಾನ್ಸ್ಟೆಬಲ್ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದರು.
ಹಲ್ಲೆಗೆ ಯತ್ನಿಸಿದ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್, ಇಬ್ಬರ ಮೇಲೂ ಗುಂಡು ಹಾರಿಸಿದ್ದು, ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.