ಬೆಂಗಳೂರು, ಜೂ 25 (DaijiworldNews/PY): "ಸೋಮವಾರ ಶಾಲೆಗಳ ಪ್ರಾರಂಭದ ವಿಚಾರವಾಗಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ನಂತರ ಮಾತನಾಡಿದ ಅವರು, "ಶಾಲೆಗಳನ್ನು ಪ್ರಾರಂಭ ಮಾಡುವ ಬೇಡಿಕೆ ಇದೆ. ತಜ್ಞರ ಸಮಿತಿ ಈ ವಿಚಾರದ ಬಗ್ಗೆ ಶಿಫಾರಸುಗಳನ್ನು ನೀಡಿದೆ. ಶಾಲೆ ಆರಂಭದ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಗಳೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಉನ್ನತಮಟ್ಟದ ಸಭೆ ನಡೆಯಲಿದೆ" ಎಂದಿದ್ದಾರೆ.
"ವಿದ್ಯಾಗಮ ಯೋಜನೆ ಜಾರಿಯಲ್ಲಿದೆ. ಕಲಿಕಾ ದಿನಚರಿಯ ಬಗ್ಗೆ ಕೂಡಾ ಯೋಜನೆಯನ್ನು ರೂಪಿಸಲಾಗಿದ್ದು, ಶಾಲಾ ತರಗತಿ ಪ್ರಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಬಾಕಿ" ಎಂದು ತಿಳಿಸಿದ್ದಾರೆ.
"ತರಗತಿ ಪ್ರಾರಂಭಿಸುವ ಬಗ್ಗೆ ಪೋಷಕರಿಂದಲೂ ಬೇಡಿಕೆ ಇದೆ. ಶೀಘ್ರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. 15 ತಿಂಗಳುಗಳಿಂದ ಶಾಲಾ ತರಗತಿಗಳು ನಡೆದಿಲ್ಲ" ಎಂದಿದ್ದಾರೆ.