ಬೆಂಗಳೂರು, ಜೂ 25 (DaijiworldNews/PY): "ಸಿದ್ದರಾಮಯ್ಯ ಅವರು ಬೇರೆ ಪಕ್ಷದಿಂದ ಬಂದಿದ್ದು ಅವರಿಗೆ ಸಿಎಂ ಅವಕಾಶ ಕೊಟ್ಟಾಗಿದೆ. ಅದೇ ಪಕ್ಷದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಗಬೇಕು" ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾಜಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರಿಗೆ ಈ ರೀತಿಯಾದ ಪರಿಸ್ಥಿತಿ ಬರಬಾರದು. ಸಿದ್ದರಾಮಯ್ಯ ಶಿಷ್ಯಂದಿರು ಎಲ್ಲವನ್ನೂ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಹೇಳಿದರೆ ಕಾಂಗ್ರೆಸ್ಗೆ 150 ಸೀಟು ಬರುತ್ತದೆ ಎನ್ನುತ್ತಾರೆ. ಆದರೆ, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ 70 ಸ್ಥಾನಗಳಿಗೆ ಬಂದಿದ್ದೇಕೆ?" ಎಂದು ಪ್ರಶ್ನಿಸಿದ್ದಾರೆ.
"ಸಿಎಂ ಸ್ಥಾನ ಉಂಡು ಬಿಸಾಡುವುದಲ್ಲ. ಅದನ್ನು ಸ್ವಚ್ಛವಾಗಿರಿಸಿ ಮುಂದೆ ಬರುವವರಿಗೆ ಅವಕಾಶ ಮಾಡಿಕೊಡಬೇಕು. ಸಿದ್ದರಾಮಯ್ಯ ಅವರಿಗೆ ಒಂದು ಬಾರಿ ಅವಕಾಶ ಸಿಕ್ಕಿದೆ. ಅದೇ ಪಕ್ಷದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಗಬೇಕು" ಎಂದಿದ್ದಾರೆ.
"ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಪರಮೇಶ್ವರ್ ಇದ್ದಾರೆ. ಅನಗತ್ಯವಾದ ಗೊಂದಲ ಸೃಷ್ಟಿಸಿ ಜಮೀರ್ ಅವರನ್ನು ಮುಂದಿಟ್ಟುಕೊಂಡು ಹೋಗಬೇಡಿ ಸಿದ್ದರಾಮಯ್ಯ ಅವರೇ, ಒಳ್ಳೆಯದಾಗಲ್ಲ" ಎಂದು ಹೇಳಿದ್ದಾರೆ.