ಬೆಂಗಳೂರು, ಜೂ 25 (DaijiworldNews/PY): "ರೈತರೆದುರು ಸಮಸ್ಯೆಗಳನ್ನಿಟ್ಟು ಕೌರವನಂತೆ ವೈಶಂಪಾಯನ ಸರೋವರದಲ್ಲೇಕೆ ಅಡಗಿದ್ದೀರಿ, ಪಾಂಡವರಂತೆ ಬಿಕ್ಕಟ್ಟುಗಳನ್ನ ಬಗೆಹರಿಸಿ!" ಎಂದು ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಅಯೋಗ್ಯತನ ಯಾರದ್ದು ಎನ್ನುವುದನ್ನ ರಾಜ್ಯ ಕಂಡಿದೆ ಸಚಿವರೇ, ಬಿತ್ತನೆ ಬೀಜ ಸಿಗದಿರುವುದೇಕೆ? ಡಿ.ವಿ ಸದಾನಂದ ಗೌಡ ಅವರು ರಾಜ್ಯದವರಾಗಿದ್ದರೂ ರೈತರಿಗೆ ರಸಗೊಬ್ಬರ ಏಕೆ ಸಿಗ್ತಿಲ್ಲ? ಬೆಳೆ ವಿಮೆ ಹಣ ಏಕೆ ಸಿಗ್ತಿಲ್ಲ? ರೈತರೆದುರು ಸಮಸ್ಯೆಗಳನ್ನಿಟ್ಟು ಕೌರವನಂತೆ ವೈಶಂಪಾಯನ ಸರೋವರದಲ್ಲೇಕೆ ಅಡಗಿದ್ದೀರಿ, ಪಾಂಡವರಂತೆ ಬಿಕ್ಕಟ್ಟುಗಳನ್ನ ಬಗೆಹರಿಸಿ!" ಎಂದು ಕೆಂಡಕಾರಿದೆ.
"ಸಿಎಂ ಬಿ.ಎಸ್ ಯಡಿಯೂರಪ್ಪ ಅವರೇ, ರೈತರನ್ನ ಮೆಚ್ಚಿಸಲು ಹಸಿರು ಶಾಲಿನ ಪ್ರಮಾಣ ವಚನದ ನಾಟಕವಾಡಿದ ನೀವು ಈಗ ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದೀರಿ. ಕಳೆದ ಬಾರಿ ಗೊಬ್ಬರ ಕೇಳಿದ ರೈತರಿಗೆ ಗುಂಡೇಟು, ಈ ಬಾರಿ ಬಿತ್ತನೆ ಬೀಜ ಕೇಳಿದವರಿಗೆ ಲಾಠಿ ಏಟು. ಕನಿಷ್ಠ ಬೀಜ, ಗೊಬ್ಬರ ನೀಡಲಾಗದ ಬಿಜೆಪಿ ಸರ್ಕಾರ ರೈತರ ಉದ್ದಾರಕ್ಕೆ ಇನ್ಯಾವ ಸಾಧನೆ ಮಾಡಬಲ್ಲದು?" ಎಂದು ಪ್ರಶ್ನಿಸಿದೆ.
"ಕೊರೊನಾ 3ನೇ ಅಲೆಯ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ, ಸರ್ಕಾರ ಇನ್ನೂ ಆಂತರಿಕ ಕಲಹದಿಂದ ಹೊರಬಂದು ಸಿದ್ಧತೆ ಮಾಡಿಕೊಳ್ಳುತ್ತಿಲ್ಲ. ಒಂದು, ಎರಡನೇ ಅಲೆಯಲ್ಲಿ ಹೆಣದಲ್ಲೂ ಹಣ ಮಾಡಿದ ಬಿಜೆಪಿ ಸರ್ಕಾರ 3ನೇ ಅಲೆ ಬರಲಿ, ಕೊರೊನಾ ಹೆಸರಲ್ಲಿ ಮತ್ತೊಂದಿಷ್ಟು ಹಣ ಮಾಡೋಣ ಎಂದೇ ಕಾಯುತ್ತಿರುವಂತಿದೆ" ಎಂದು ಆರೋಪಿಸಿದೆ.