ನಾಗ್ಪುರ, ಜೂ 25 (DaijiworldNews/PY): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ನಾಗ್ಪುರ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಅನಿಲ್ ದೇಶ್ ಮುಖ್ ವಿರುದ್ಧ ಮಾರ್ಚ್ನಲ್ಲಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರು ಭ್ರಷ್ಟಾಚಾರದ ಆರೋಪಗಳನ್ನು ನಡೆಸಿದ್ದರು. ಇದರ ಸಂಬಂಧ ಇಡಿ ದಾಳಿ ನಡೆದಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಅನಿಲ್ ದೇಶ್ ಮುಖ್ ವಿರುದ್ದ ಪರಂಬೀರ್ ಸಿಂಗ್ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಇದಲ್ಲದೇ, ಬಾಂಬೆ ಹೈಕೋರ್ಟ್ಗೆ ದೇಶ್ ಮುಖ್ ಅವರು ಅರ್ಜಿ ಸಲ್ಲಿಸಿದ್ದರು. ಮಾಜಿ ಸಹಾಯಕ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರಿಗೆ ದೇಶ್ ಮುಖ್ ಅವರು, ತಿಂಗಳಿಗೆ 100 ಕೋಟಿ. ರೂ.ಗಳನ್ಜು ಸುಲಿಗೆ ಮಾಡುವಂತೆ ತಿಳಿಸಿದ್ದರು. ಬಾರ್ ಹಾಗೂ ರೆಸ್ಟೋರೆಂಟ್ಗಳನ್ನು ಗುರಿಯಾಗಿಸಿಕೊಂಡು ಅಧಿಕ ಹಣ ಸಂಗ್ರಹಿಸುವಂತೆ ಸೂಚನೆ ನೀಡಿದ್ದರು ಎಂದು ಆರೋಪಿಸಿದ್ದರು.
ಇದರ ನಂತರ ಸಿಬಿಐ ಪ್ರಾಥಮಿಕ ವಿಚಾರಣೆ ನಡೆಸಿ ಅನಿಲ್ ದೇಶ್ ಮುಖ್ ವಿರುದ್ದ ಎಫ್ಐಆರ್ ದಾಖಲಿಸಿದೆ. ಬಳಿಕ ದೇಶ್ ಮುಖ್ ಹಾಗೂ ಅವರ ಆಪ್ತರ ನಿವಾಸಗಳಲ್ಲಿ ಹುಡುಕಾಟ ಕಾರ್ಯ ನಡೆಸಲಾಗಿತ್ತು. ಇಡಿ ಅವರ ವಿರುದ್ದ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದ್ದು, ಪ್ರಕರಣದ ಸಂಬಂಧ ತನಿಖೆ ಪ್ರಾರಂಭಿಸಿತ್ತು. ಈ ಹಿನ್ನೆಲೆ ಅನಿಲ್ ದೇಶ್ ಮುಖ್ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.