ನವದೆಹಲಿ, ಜೂ.25 (DaijiworldNews/HR): ಕೇಂದ್ರ ಸರ್ಕಾರ ಹೆಚ್ಚಿಸುತ್ತಿರುವ ಹಣದುಬ್ಬರ, ಇಂಧನ ದರ ಏರಿಕೆ ವಿರುದ್ಧ ಜುಲೈ 7ರಿಂದ 17ರ ವರೆಗೆ ದೇಶವ್ಯಾಪಿ ಅಭಿಯಾನ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಘಟಕಗಳ ಉಸ್ತುವಾರಿಗಳ ಜತೆ ನಡೆಸಿದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, "ಹಣದುಬ್ಬರ, ಇಂಧನ ದರ ಏರಿಕೆ, ಧಾನ್ಯಗಳು, ಖಾದ್ಯ ತೈಲ ಮತ್ತು ಅಗತ್ಯವಸ್ತುಗಳ ಬೆಲೆ ಏರಿಕೆ ಸೇರಿದಂತೆ ತುರ್ತು ಆದ್ಯತೆ ನೀಡಬೇಕಿರುವ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು "ಮೇ 2ರ ನಂತರ 29 ಬಾರಿ ಇಂಧನ ಬೆಲೆ ಹೆಚ್ಚಿಸಲಾಗಿದ್ದು, 150ಕ್ಕೂ ಅಧಿಕ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ 100 ಗಡಿ ದಾಟಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದ ಮೂಲಕ ಬಿಜೆಪಿ ಸರ್ಕಾರವು ಕಳೆದ ಏಳು ವರ್ಷಗಳಲ್ಲಿ 22 ಲಕ್ಷ ಕೋಟಿ ಗಳಿಸಿದೆ" ಎಂದು ಹೇಳಿದ್ದಾರೆ.