ಬೆಂಗಳೂರು, ಜೂ.25 (DaijiworldNews/HR): ಕೊರೊನಾದಿಂದ ಸಂಕಷ್ಟದಲ್ಲಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಕೆಲವು ರಿಯಾಯಿತಿಗಳನ್ನು ಪ್ರಕಟಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್, ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳಿಗೆ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ 50 ರಷ್ಟು ವಿನಾಯಿತಿ ನೀಡಲಾಗಿದ್ದು, ಏಪ್ರಿಲ್ ಮತ್ತು ಜೂನ್ ತಿಂಗಳ ವಿದ್ಯುಚ್ಚಕ್ತಿ ಶುಲ್ಕವನ್ನೂ ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಅಬಕಾರಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕಗಳಲ್ಲಿ ಶೇ 50 ರಷ್ಟು ಮೊತ್ತವನ್ನು ಪಾವತಿಸುವುದು ಮತ್ತು ಉಳಿದ ಶೇ 50 ರಷ್ಟು ಮೊತ್ತವನ್ನು ಈ ವರ್ಷದ ಡಿಸೆಂಬರ್ 31 ರೊಳಗೆ ಪಾವತಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.
ಇನ್ನು ಈಗಾಗಲೇ ಪ್ರಕಟಿಸಿರುವಂತೆ ನೋಂದಣಿ ಮಾಡಿಕೊಂಡಿರುವ ಪ್ರತಿ ಪ್ರವಾಸಿ ಮಾರ್ಗದರ್ಶಿಗೆ 5,000 ಪರಿಹಾರದ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.