ಬೆಂಗಳೂರು, ಜೂ 24 (DaijiworldNews/PY): "ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಕೊರೊನಾ ಲಸಿಕಾಕರಣ ನಡೆಸುವ ಕುರಿತು ನಿರ್ಧರಿಸಲಾಗಿದೆ" ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪದವಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಕೊರೊನಾ ಲಸಿಕಾಕರಣ ನಡೆಸುವ ಕುರಿತು ನಿರ್ಧರಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ಹಾಗೂ ಭಾರತ ಸರ್ಕಾರದ ಮಾರ್ಗಸೂಚಿಯಂತೆ ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಅಭಿಯಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಆದೇಶ ಹೊರಡಿಸಲಾಗಿದೆ" ಎಂದಿದ್ದಾರೆ.
"18 ವರ್ಷ ದಾಟಿದ ಕಾಲೇಜು ವಿದ್ಯಾರ್ಥಿಗಳು, ಬೋಧಕ ಹಾಗೂ ಸಹಾಯಕ ಸಿಬ್ಬಂದಿಗೆ ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ನೀಡಲಾಗುವುದು. ಮೊದಲ ಡೋಸ್ ಲಸಿಕೆ ಹಾಕಿದ ಬಳಿಕ ಕಾಲೇಜುಗಳಲ್ಲಿ ನೇರ ತರಗತಿಗಳನ್ನು ಪ್ರಾರಂಭ ಮಾಡುವ ವಿಚಾರದ ಬಗ್ಗೆ ತೀರ್ಮಾನ ಮಾಡಲಾಗುವುದು" ಎಂದು ತಿಳಿಸಿದ್ದಾರೆ.
"ಇತ್ತೀಚೆಗೆ ಸಿಎಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಸಿಕೆ ಹಾಕಿ ಬಳಿಕ ಪದವಿ ತರಗತಿಗಳನ್ನು ಪ್ರಾರಂಭ ಮಾಡುವ ಬಗ್ಗೆ ಚರ್ಚಿಸಲಾಯಿತು. ಆಯಾ ಕಾಲೇಜುಗಳಲ್ಲಿಯೇ ಲಸಿಕಾ ಅಭಿಯಾನ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ಲಸಿಕೆ ಪಡೆದುಕೊಳ್ಳಲು ಆಯಾ ಸ್ಥಳಗಳಲ್ಲಿ ನೀಡಲಾಗುವ ದೃಢೀಕರಣ ಪತ್ರ ಹಾಜರುಪಡಿಸಬೇಕು. ಪ್ರತೀ ಕಾಲೇಜಿನ ಮುಖ್ಯಸ್ಥರು ಹಾಗೂ ಇನ್ನೊಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನಿಯೋಜನೆ ಮಾಡಲಾಗುವುದು. ಲಸಿಕೀಕರಣಕ್ಕೆ ಪ್ರತ್ಯೇಕವಾದ ಮಾರ್ಗಸೂಚಿ ಇರುತ್ತದೆ. ಅದರನ್ವಯ ಲಸಿಕೀಕರಣ ನಡೆಸಲಾಗುವುದು. ಆಯಾ ಶಿಕ್ಷಣ ಸಂಸ್ಥೆಯಲ್ಲಿನ ಎಲ್ಲ ಅರ್ಹರಿಗೂ ನೋಡಲ್ ಅಧಿಕಾರಿಗಳು ತಪ್ಪದೇ ಲಸಿಕೆ ಕೊಡಿಸಬೇಕು ಎಂದು ಸೂಚನೆ ನೀಡಲಾಗಿದೆ" ಎಂದಿದ್ದಾರೆ.
"ಲಸಿಕೆ ಪಡೆದುಕೊಂಡ ಬಳಿಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬಹುದು. ಅಥವಾ ತಾವಿದ್ದಲ್ಲಿಯೇ ಆನ್ಲೈನ್ ಕ್ಲಾಸ್ಗೆ ಹಾಜರಾಗಬಹುದು. ಹಾಜರಾತಿ ಕಡ್ಡಾಯ" ಎಂದು ತಿಳಿಸಿದ್ದಾರೆ.