ಬೆಂಗಳೂರು, ಜೂ 24 (DaijiworldNews/PY): "ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರನ್ನು ಹತ್ಯೆಗೈದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಲಾಗುವುದು" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಈಗಾಗಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ಪಂಥ್ ಅವರೊಂದಿಗೆ ಮಾತನಾಡಿದ್ದು, ಮಾಹಿತಿ ಪಡೆದುಕೊಂಡಿದ್ದೇನೆ. ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಲು ಸೂಚನೆ ನೀಡಿದ್ದೇನೆ" ಎಂದಿದ್ದಾರೆ.
"ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಎನ್ನುವುದು ಖಚಿತಪಟ್ಟಿಲ್ಲ. ಹಳೆ ದ್ವೇಷವೋ ಅಥವಾ ರಾಜಕೀಯ ವೈಷಮ್ಯವೋ ಎನ್ನುವುದ ತನಿಖೆಯಿಂದ ತಿಳಿದುಬರಬೇಕಿದೆ. ಘಟನೆಯ ಸಂಬಂಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಯುಕ್ತರಿಗೆ ಸೂಚಿಸಿದ್ದೇನೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಪ್ರಕರಣದ ಸಂಬಂಧ ಆಯುಕ್ತರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ಈ ಹಿಂದೆ ಅವರ ಪತಿಯನ್ನು ಕೂಡಾ ಹತ್ಯೆ ಮಾಡಲಾಗಿತ್ತು. ಇದೀಗ ಅವರ ಪತ್ನಿಯನ್ನೂ ಹತ್ಯೆ ಮಾಡಲಾಗಿದೆ. ಈ ಸಂಬಂಧ ಯಾವೆಲ್ಲಾ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೋ ಅವುಗಳನ್ನು ತೆಗೆದುಕೊಳ್ಳುತ್ತೇವೆ. ಈ ರೀತಿಯಾದ ಘಟನೆಗಳಿಂದ ನಗರದ ಜನತೆ ಭೀತಿಗೆ ಒಳಗಾಗಬಾರದು" ಎಂದು ಸಿಎಂ ಬಿಎಸ್ವೈ ಮನವಿ ಮಾಡಿದ್ದಾರೆ.
ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಕಿಟ್ ವಿತರಿಸಲು ತೆರಳಿದ್ದಂತ ಮಾಜಿ ಕಾರ್ಪೋರೇಟ್ ರೇಖಾ ಕದಿರೇಶ್ ಅವರನ್ನು, ಇಂದು ಬೆಳಗ್ಗೆ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. 2018ರ ಫೆಬ್ರವರಿ 8ರಂದು ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಅವರ ಪತಿ, ಕದಿರೇಶ್ ಅವರನ್ನು ಶೋಭನ್ ಅಂಡ್ ಗ್ಯಾಂಗ್ ಕೊಚ್ಚಿ ಕೊಲೆ ಮಾಡಿತ್ತು.