ಬೆಂಗಳೂರು, ಜೂ.24 (DaijiworldNews/HR): ಎಲ್ಲಿ ಎನೇ ನಡೆದರೂ ಬಿಜೆಪಿಯವರು ನನ್ನ ಟಾರ್ಗೆಟ್ ಮಾಡಿ ಆರೋಪ ಮಾಡುತ್ತಿದ್ದಾರೆ ಅವರಿಗೆ ಕನಸಿನಲ್ಲೂ ನಾನೇ ಬರುತ್ತಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.
ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದ ಬಿಜೆಪಿ ಮುಖಂಡ ಎನ್.ಆರ್.ರಮೇಶ್, ಶಾಸಕ ಜಮೀರ್ ಅಹ್ಮದ್ ವಿರುದ್ಧ ಆರೋಪ ಮಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಜಮೀರ್ ಅಹ್ಮದ್, "ರೇಖಾ ಕದಿರೇಶ್ ನನ್ನ ಸಹೋದರಿಯಂತೆ, ನನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರವಾದದ್ದು, ಪಾಲಿಕೆ ಮಾಜಿ ಸದಸ್ಯರೊಬ್ಬರಿಗೆ ರಕ್ಷಣೆ ನಿಡಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ ಇಂತಹ ಬಿಜೆಪಿ ಸರ್ಕಾರ ಯಾಕೆ ಇರಬೇಕು? ತಮ್ಮ ತಪ್ಪುಗಳನ್ನು ಮುಚ್ಚಿಡಲು ಅನಗತ್ಯ ಆರೋಪ ಮಾಡುತ್ತಿದ್ದಾರೆ" ಎಂದರು.
ಇನ್ನು ಪೊಲೀಸರು ತನಿಖೆ ಕೈಗೊಳ್ಳುವ ಮೊದಲು ಬಿಜೆಪಿ ನಾಯಕರು ನನ್ನ ವಿರುದ್ಧ ಆರೋಪ ಮಾಡಲು ಪೊಲೀಸರು ಇವರಿಗೆ ತನಿಖೆ ಜವಾಬ್ದಾರಿ ಕೊಟ್ಟಿದ್ದಾರೆಯೇ? ಬಿಜೆಪಿ ನಾಯಕರು ತನಿಖೆ ನಡೆಸಲು ಎಂದಿನಿಂದ ಆರಂಭಿಸಿದರು?" ಎಂದು ಪ್ರಶ್ನಿಸಿದ್ದಾರೆ.
ರೇಖಾ ಅವರ ಪತಿ ಕದಿರೇಶ್ ಹತ್ಯೆ ನಡೆದಾಗಲೂ ನನ್ನ ವಿರುದ್ಧ ಆರೋಪ ಮಾಡಿದ್ದರು. ಆದರೆ ಏನಾಯಿತು? ತನಿಖೆ ಬಳಿಕ ಸತ್ಯ ಹೊರಬಂತು. ಏನೇ ನಡೆದರೂ ಬಿಜೆಪಿ ನಾಯಕರಿಗೆ ನಾನೊಬ್ಬ ಕಾಣುತ್ತಿದ್ದೇನೆ" ಎಂದು ಕಿಡಿಕಾರಿದ್ದಾರೆ.