ಶಿವಮೊಗ್ಗ, ಜೂ 24 (DaijiworldNews/PY): "ಸಿಎಂ ಖುರ್ಚಿಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆಸುತ್ತಿರುವ ಫೈಟ್ ಗಮನಿಸಿದರೆ ಕಾಂಗ್ರೆಸ್ಸಿಗರು ಕತ್ತಲ ಕೋಣೆಯಲ್ಲಿ ಇಲ್ಲದ ಕರಿ ಬೆಕ್ಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದೆನಿಸುತ್ತಿದೆ" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಖುರ್ಚಿ ಕನಸು ಕಾಣುವ ಮುನ್ನ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಗೆದ್ದು ಬರಬೇಕು. ಅವರ ಪಕ್ಷಕ್ಕೆ ಬಹುಮತ ಬರಬೇಕು. ಅಲ್ಲದೇ, ಅವರ ಶಾಸಕರು ಒಪ್ಪಿಗೆ ನೀಡಬೇಕು. ಬಳಿಕ ಕೇಂದ್ರ ನಾಯಕರು ನಿರ್ಧರಿಸಬೇಕು. ಕಾಂಗ್ರೆಸ್ ಶಾಸಕರಾದ ಅಖಂಡ ಶ್ರೀನಿವಾಸ್, ರಾಮಪ್ಪ, ಜಮೀರ್ ಅವರು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದಾಕ್ಷಣ ಸಿಎಂ ಆಗುವುದಕ್ಕೆ ಸಿಎಂ ಸ್ಥಾನ ಅವರ ಜೇಬಿನಲ್ಲಿದೆಯಾ" ಎಂದು ವ್ಯಂಗ್ಯವಾಡಿದ್ದಾರೆ.
"ಸಿದ್ದರಾಮಯ್ಯ ನಾನು ಮುಂದಿನ ಸಿಎಂ ರೇಸ್ನಲ್ಲಿಲ್ಲ. ಶಾಸಕರು ಈ ರೀತಿಯಾಗಿ ಮಾತನಾಡಬಾರದು. ಮಾತನಾಡಿದಲ್ಲಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎನ್ನುವ ಕಠಿಣ ನಿಲುವು ತೆಗೆದುಕೊಳ್ಳಲಿ ನೋಡೋಣ" ಎಂದು ಸವಾಲು ಎಸೆದಿದ್ದಾರೆ.
"ರಾಜ್ಯದ ಜನತೆ ಕಾಂಗ್ರೆಸ್ ಅನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಸದ್ಯ 72 ಸ್ಥಾನ ಪಡೆದುಕೊಂಡಿದ್ದೀರಿ. ಮುಂಬರುವ ಚುನಾವಣೆಯಲ್ಲಿ 72 ಸ್ಥಾನ ಬರುತ್ತದೋ ಇಲ್ಲವೋ ತಿಳಿದಿಲ್ಲ. ಹಾಗಿರುವಾಗ ಸಿಎಂ ಸ್ಥಾನಸ ಕನಸು ಕಾಣುತ್ತಿರುವುದು ಹಾಸ್ಯಾಸ್ಪದವಾಗಿದೆ" ಎಂದಿದ್ದಾರೆ.