ಮುಂಬೈ, ಜೂ.24 (DaijiworldNews/HR): "ಕೇಂದ್ರದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಕೈಜೋಡಿಸಿ, ಈ ಮೂಲಕ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಬೇಕು" ಎಂದು ಶಿವಸೇನೆ ಆಗ್ರಹಿಸಿದೆ.
ಈ ಕುರಿತು ಶಿವಸೇನಾ ಮುಖವಾಣಿ 'ಸಾಮ್ನಾ'ದಲ್ಲಿ ಬರೆದುಕೊಂಡಿದ್ದು, ರಾಹುಲ್ ಗಾಂಧಿ ಅವರು ಕೇಂದ್ರ ಮತ್ತು ಅದರ ನೀತಿಗಳನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ, ಅದರೆ ಅದು ಟ್ವಿಟರ್ನಲ್ಲಿ ಮಾತ್ರ ಎಂದು ಹೇಳಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿಯವರ ದೇಹ ಭಾಷೆಯೇ ಇತ್ತೀಚೆಗೆ ಬದಲಾಗಿದ್ದು, ದೇಶದ ಪರಿಸ್ಥಿತಿ ತನ್ನ ಕೈಮೀರಿ ಹೋಗಿದೆ ಎಂಬುದರ ಅರಿವು ಅವರಿಗೆ ಆಗಿದೆ. ಆದರೆ ಜನರ ಕೋಪದ ಹೊರತಾಗಿಯೂ, ದುರ್ಬಲ ಮತ್ತು ಭಿನ್ನಾಭಿಪ್ರಾಯಗಳಿರುವ ವಿರೋಧ ಪಕ್ಷಗಳಿಂದ ತಮಗೆ ಯಾವುದೇ ಸಂಕಟ ಬರುವುದಿಲ್ಲ ಎಂಬ ವಿಶ್ವಾಸವನ್ನು ಬಿಜೆಪಿ ಮತ್ತು ಸರ್ಕಾರ ಹೊಂದಿದೆ" ಎಂದು ಹೇಳಿದೆ.
ರಾಹುಲ್ ಗಾಂಧಿ ಅವರು ಎಲ್ಲ ವಿರೋಧ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಬೇಕು ಎಂದು ಆಗ್ರಹಿಸಿರುವ ಸೇನಾ, "ಶರದ್ ಪವಾರ್ ಅವರು ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸಬಹುದು. ಆದರೆ, ನಾಯಕತ್ವದ ಪ್ರಶ್ನೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವ ವಹಿಸುತ್ತದೆ ಎಂದು ನಿರೀಕ್ಷಿಸಿದರೆ, ಅದು ರಾಷ್ಟ್ರೀಯ ಅಧ್ಯಕ್ಷರಿಲ್ಲದ ಪಕ್ಷವಾಗಿದೆ" ಎಂದು ತಿಳಿಸಿದೆ.