ಬೆಂಗಳೂರು, ಜೂ 24(DaijiworldNews/PY): "ರೈತರು ಅನಿವಾರ್ಯವಾಗಿ ಬೀಜಗಳನ್ನು ದುಪ್ಪಟ್ಟು ಬೆಲೆಯಲ್ಲಿ ಕಾಳಸಂತೆಯಲ್ಲಿ ಖರೀದಿಸಿ ಮೋಸ ಹೋಗುತ್ತಿದ್ದಾರೆ, ರೈತರ ಈ ಸಮಸ್ಯೆಗಳನ್ನು ಚಿಂತಿಸದ ಬಿಜೆಪಿ ಸರ್ಕಾರಕ್ಕೆ ಹಾಗೂ ಮಂತ್ರಿಗಳಿಗೆ ಕುರ್ಚಿ ಕದನ ಒಂದೇ ಪ್ರಾಧಾನ್ಯತೆ" ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಆಕ್ಸಿಜನ್, ಲಸಿಕೆಗಳ ನಂತರ ಈ ಸರ್ಕಾರದ "ಇಲ್ಲ"ಗಳ ಪಟ್ಟಿಗೆ ಹೊಸ ಸೇರ್ಪಡೆ ಗೊಬ್ಬರ, ಬಿತ್ತನೆ ಬೀಜ. ಈ ಹದವಾದ ಮುಂಗಾರಿನ ವಾತಾವರಣದಲ್ಲಿ ರೈತರುಬೆಳೆ ಹಾಕಲು ತುರಾತುರಿಯಲ್ಲಿದ್ದರೂ ಬಿತ್ತನೆ ಬೀಜ, ಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ, ಕೃಷಿ ಸಚಿವ ಬಿ. ಸಿ. ಪಾಟೀಲ್ ಚಾದರ ಹೊದ್ದು ಮಲಗಿದ್ದಾರೆ. ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ?" ಎಂದು ಪ್ರಶ್ನಿಸಿದೆ.
ರೈತರಿಗೆ ಬೆಳೆ ವಿಮೆಯಲ್ಲಿ ಮೋಸ, ಹಿಂದಿನ ನೆರೆ ಪರಿಹಾರ ಇಲ್ಲ, ಲಾಕ್ಡೌನ್ನಲ್ಲಿ ಬೆಳೆ ನಷ್ಟ, ಲಾಕ್ಡೌನ್ ಪರಿಹಾರವೂ ಇಲ್ಲ, ಕೃಷಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬರೆ, ಗೊಬ್ಬರದ ಪೂರೈಕೆ ಇಲ್ಲ, ಬಿತ್ತನೆ ಬೀಜಗಳೂ ಕೊಡುತ್ತಿಲ್ಲ ಈ ಭ್ರಷ್ಟ ಬಿಜೆಪಿ ರೈತರನ್ನು ಆತ್ಮಹತ್ಯೆಯ ಪರಿಸ್ಥಿತಿಗೆ ದೂಡಿ 'ಹೇಡಿಗಳು' ಎಂದು ದೂಷಿಸುತ್ತದೆ ಎಂದಿದೆ.
"ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆ ಮಾಡದೆ ಸರ್ಕಾರವೇ ಕಾಳಸಂತೆಯನ್ನು ಪ್ರೋತ್ಸಾಹಿಸುತ್ತಿದೆ, ರೈತರು ಅನಿವಾರ್ಯವಾಗಿ ಬೀಜಗಳನ್ನು ದುಪ್ಪಟ್ಟು ಬೆಲೆಯಲ್ಲಿ ಕಾಳಸಂತೆಯಲ್ಲಿ ಖರೀದಿಸಿ ಮೋಸ ಹೋಗುತ್ತಿದ್ದಾರೆ, ರೈತರ ಈ ಸಮಸ್ಯೆಗಳನ್ನು ಚಿಂತಿಸದ ಬಿಜೆಪಿ ಸರ್ಕಾರಕ್ಕೆ ಹಾಗೂ ಮಂತ್ರಿಗಳಿಗೆ ಕುರ್ಚಿ ಕದನ ಒಂದೇ ಪ್ರಾಧಾನ್ಯತೆ" ಎಂದು ಕಿಡಿಕಾರಿದೆ.