ಬೆಂಗಳೂರು, ಜೂ 24(DaijiworldNews/PY): "ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಪತ್ತೆಯಾಗುತ್ತಿರುವ ಹಿನ್ನೆಲೆ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸುವುದು ಅವಶ್ಯಕ" ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇರಳದ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಎಚ್ಚರ ವಹಿಸುವುದು ಅಗತ್ಯ. ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಅಲ್ಲಿ ಶೇ.4-5 ರಷ್ಟು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವ ಬಗ್ಗೆ ಸೂಚನೆ ನೀಡಲಾಗಿದೆ" ಎಂದಿದ್ದಾರೆ.
"ಬೆಂಗಳೂರು ಹಾಗೂ ಮೈಸೂರಿನಲ್ಲಿ ತಲಾ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಮಾದರಿ ಸೋಂಕು ಅಧಿಕೃತವಾಗಿ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಸೋಂಕು ಪತ್ತೆಯಾದವರು ಹಿರಿಯ ನಾಗರಿಕರಾಗಿದ್ದಾರೆ. ಇಬ್ಬರ ಮೇಲೂ ತೀವ್ರ ನಿಗಾ ಇಡಲಾಗಿದ್ದು, ಪ್ರಾಥಮೊಕ ಸಂಪರ್ಕದಲ್ಲಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ" ಎಂದು ತಿಳಿಸಿದ್ದಾರೆ.