ಕೋಲ್ಕತ್ತ, ಜೂ.24 (DaijiworldNews/HR): ಕೊರೊನಾದ ಮೂರನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸುವ ಸಾಧ್ಯತೆ ಇದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದು, ಈ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 12 ವರ್ಷದವರೆಗಿನ ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾವು ಮೂರನೇ ಅಲೆಯನ್ನು ಎದುರಿಸುವುದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದು, ಎರಡನೇ ಅಲೆಯಲ್ಲಿ ಅನೇಕ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ 0 ಯಿಂದ 12 ವರ್ಷದವರೆಗಿನ ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಆದ್ಯತೆಯ ಮೇಲೆ ಲಸಿಕೆ ನೀಡುವುದಕ್ಕೆ ನಾವು ನಿರ್ಧರಿಸಿದ್ದೇವೆ" ಎಂದರು.
"ಕರ್ನಾಟಕದಲ್ಲಿ ಈವರೆಗೂ ಕನಿಷ್ಠ ಎರಡು ಕೋಟಿ ಜನರಿಗೆ ಕೊರೊನಾ ವಿರುದ್ಧದ ಲಸಿಕೆ ನೀಡಲಾಗಿದ್ದು, ಗುರುವಾರದಿಂದ ದಿನಕ್ಕೆ ಸರಾಸರಿ ನಾಲ್ಕು ಲಕ್ಷ ಜನರಿಗೆ ಲಸಿಕೆ ನೀಡಲು ನಾವು ತೀರ್ಮಾನಿಸಿದ್ದೇವೆ" ಎಂದಿದ್ದಾರೆ.
ಇನ್ನು ಪಶ್ಚಿಮ ಬಂಗಾಳ ಸರ್ಕಾರವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಕನಿಷ್ಠ 26,000 ಕೊರೊನಾ ಹಾಸಿಗೆಗಳನ್ನು ಮೀಸಲಿಡಲು ನಿರ್ಧರಿಸಿದ್ದು, 90 ದಿನಗಳಿಂದ 12 ವರ್ಷದೊಳಗಿನ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳನ್ನು ಹೊಂದಿರುವ ಮಕ್ಕಳ ಪ್ರಕರಣಗಳಿಗೆ ಸುಮಾರು 10,000 ಸಾಮಾನ್ಯ ಹಾಸಿಗೆಗಳನ್ನು ಮೀಸಲಿಡಲಾಗಿದೆ" ಎಂದುಹೇಳಿದ್ದಾರೆ.