ಬೆಂಗಳೂರು, ಜೂ 24(DaijiworldNews/PY): "ಯುಪಿಎ ಅವಧಿಯ ಸಂದರ್ಭ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕೈ ಮುಖಂಡರಿಗೆ ಈಗ ವಿಲವಿಲ ಒದ್ದಾಡುವಂತಾಗಿದೆ" ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬಿಜೆಪಿ ರಾಜ್ಯ ಮಟ್ಟದ 'ಇ ಪ್ರಶಿಕ್ಷಣ' ಚಿಂತನವರ್ಗದಲ್ಲಿ ವೆಬೆಕ್ಸ್ ಮೂಲಕ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಒದಗಿಸುವ ವಿವಿಧ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆಯ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿರುವ ಕಾರಣ ಒಂದು ರೂ. ಕೂಡಾ ಭ್ರಷ್ಟಾಚಾರ ಮಾಡಲು ಆಗುತ್ತಿಲ್ಲ. ಹಾಗಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕೈ ಮುಖಂಡರಿಗೆ ಈಗ ವಿಲವಿಲ ಒದ್ದಾಡುವಂತಾಗಿದೆ" ಎಂದಿದ್ದಾರೆ.
"ಪ್ರಧಾನಿ ಮೋದಿ ಅವರು 46 ಕೋಟಿ ಜನರ ಬ್ಯಾಂಕ್ ಖಾತೆಗಳನ್ನು ಜನ್ಧನ್ ಯೋಜನೆಯಡಿ ತೆರೆಸಿ ನೇರ ನಗದು ವರ್ಗಾವಣೆ ಜಾರಿಗೆ ತರುವ ಮೂಲಕ ಭ್ರಷ್ಟಾಚಾರ ಕಡಿವಾಣ ಹಾಕಿದ್ದಾರೆ. ಬ್ಯಾಂಕ್ಗಳ ರಾಷ್ಟ್ರೀಕರಣ ಮಾಡಿದರು ಕೂಡಾ ದೇಶದ ಬಡ ಜನರಿಗೆ ಅದರಿಂದ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್ಸಿಗರ ಗರೀಬಿ ಹಠಾವೋ ಒಂದು ಘೋಷಣೆಯಾಗಿತ್ತು. ಆದರೆ, ಅದರಿಂ ಬಡ ಜನರ ಅಭಿವೃದ್ದಿಯಾಗಿಲ್ಲ. ಅವರ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಆದರೆ, ಪ್ರಧಾನಿ ಮೋದಿ ಅವರ ಒಂದು ತೀರ್ಮಾನ ಬಡವರ ಪಾಲಿಗೆ ಬೆಳಕಾಗಿದೆ" ಎಂದು ತಿಳಿಸಿದ್ದಾರೆ.
"ಲಕ್ಷಾಂತರ ಹಳ್ಳಿಗಳಿಗೆ ಜಲ ಮಿಷನ್ ಯೋಜನೆಯಡಿ ಪ್ರಯೋಜನವಾಗಿದೆ. ಹುಬ್ಬಳ್ಳಿ, ಬೆಳಗಾವಿ, ತೋರಣಗಲ್, ಬೀದರ್ ಹಾಗೂ ಕಲಬುರ್ಗಿಯಲ್ಲಿ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣಗಳನ್ನು ಅಭಿವೃದ್ದಿ ಪಡಿಸಲಾಯಿತು. ಲಕ್ಷಾಂತರ ಹಳ್ಳಿಗಳಿಗೆ ಉಜಾಲಾ ಯೋಜನೆಯಡಿ ವಿದ್ಯುತ್ ಸಂರ್ಕ ಕಲ್ಪಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರು ಸ್ವಾವಲಂಬಿಯಾಗುವ ಸಲುವಾಗಿ ಕೈಗೊಂಡ ಮಹತ್ವದ ಕಾರ್ಯವಾಗಿದೆ" ಎಂದಿದ್ದಾರೆ.