ಬೆಂಗಳೂರು, ಜೂ. 23 (DaijiworldNews/SM): ಡಿಜಿಟಲ್ ಕಲಿಕಾ ಯೋಜನೆಯಡಿ ರಾಜ್ಯದಲ್ಲಿ ಸ್ಮಾರ್ಟ್ ತರಗತಿಗಳಿಗೆ ಚಾಲನೆ ನೀಡಲಾಗಿದೆ. ಹಾಗೂ 2500 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್ ಪಿ.ಸಿ.ಗಳನ್ನು ವಿತರಿಸಲಾಗಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರಿ ಕಾಲೇಜುಗಳಲ್ಲಿ 2,500 ತರಗತಿಗಳನ್ನು ಸ್ಮಾರ್ಟ್ ತರಗತಿ ಕೊಠಡಿಗಳಾಗಿ ಉನ್ನತೀಕರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 6,500 ತರಗತಿ ಕೊಠಡಿಗಳನ್ನು ಸ್ಮಾರ್ಟ್ ತರಗತಿಗಳಾಗಿ ಪರಿವರ್ತಿಸಲಾಗುವುದು ಎಂದರು.
2021-22ನೇ ಸಾಲಿನಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಟ್ಯಾಬ್ಲೆಟ್ ಪಿ.ಸಿ. ನೀಡಲಾಗುವುದು ಎಂದು ತಿಳಿಸಿದರು.
ಒಟ್ಟು 1.55 ಲಕ್ಷ ವಿದ್ಯಾರ್ಥಿಗಳಿಗೆ 163 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಕಲಿಕೆ ಯೋಜನೆಯ ಅಂಗವಾಗಿ ಟ್ಯಾಬ್ಲೆಟ್ ಪಿ.ಸಿ.ಗಳನ್ನು ವಿತರಿಸಲಾಗುತ್ತಿದೆ.