ಬೆಂಗಳೂರು, ಜೂ 23 (DaijiworldNews/PY): ಮಕ್ಕಳು ಹಠ ಮಾಡುತ್ತಾರೆ ಎಂಬ ಮಲತಾಯಿಯ ಮಾತು ಕೇಳಿ ಅಪ್ರಾಪ್ತ ಮಕ್ಕಳ ಮೇಲೆ ತಂದೆಯೇ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ಘಟನೆ ಬೆಂಗಳೂರಿನ ಜೆ.ಪಿ ನಗರದಲ್ಲಿ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಆರೋಪಿಯನ್ನು ಸೆಲ್ವಾ ಕ್ರೂಸರ್ ಎಂದು ಗುರುತಿಸಲಾಗಿದೆ.
ಸೆಲ್ವಾ ಕ್ರೂಸರ್ ತನ್ನ ಎರಡನೇ ಹೆಂಡತಿಯ ಮಾತು ಕೇಳಿ ಸ್ವಂತ ಮಕ್ಕಳ ಭುಜ, ಮೊಣಕೈ ಹಾಗೂ ಪಾದಗಳಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಮಕ್ಕಳು ನೋವು ಸಹಿಸಲಾರದೇ ಕಿರುಚುತ್ತಾ ಮನೆಯಿಂದ ಓಡಿ ಬಂದಿದ್ದು, ಈ ವೇಳೆ ಅಕ್ಕಪಕ್ಕದವರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ಸೆಲ್ವನ ಅವರ ಮೊದಲ ಪತ್ನಿ ಅಂಜಲಿ ಮೂರು ತಿಂಗಳ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಹಾಗಾಗಿ ಸೆಲ್ವ ಮೊದಲ ಪತ್ನಿಯ ಮೂರು ಮಕ್ಕಳನ್ನು ಎರಡನೇ ಪತ್ನಿ ಸತ್ಯಾಳ ಮನೆಗೆ ಕರೆತಂದಿದ್ದರು. ಆದರೆ, ಇದು ಸತ್ಯಾಗೆ ಇಷ್ಟವಿರಲಿಲ್ಲ. ಸೆಲ್ವ ಕೆಲಸಕ್ಕೆ ಹೋಗಿ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭ ಮಕ್ಕಳ ಮೇಲೆ ದೂರು ಹೇಳುತ್ತಿದ್ದಳು. ಪತ್ನಿಯ ಮಾತನ್ನ ಕೇಳಿ ಸೆಲ್ವ ತನ್ನ ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾರೆ.
ಪೊಲೀಸರು ಸೆಲ್ವಾನನ್ನು ಬಂಧಿಸಿ ಕೊಲೆಯತ್ನ ಪ್ರಕರಣದಡಿ ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಮಕ್ಕಳನ್ನು ರಕ್ಷಿಸಿ ಬಾಲ ಭವನದಲ್ಲಿ ಆಶ್ರಯ ನೀಡಲಾಗಿದೆ.