ಧಾರವಾಡ, ಜೂ 23 (DaijiworldNews/PY): "ನಾವೆಲ್ಲ ಒಂದೇ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೇಳಿದ್ದು. ಆದರೆ, ಈಗ ಮುಂದಿನ ಸಿಎಂಗಾಗಿ ಗುದ್ದಾಟ ನಡೆಯುತ್ತಿದೆ. ಇದಿರಂದ ಕಾಂಗ್ರೆಸ್ಸಿಗರ ದಾಹ ಎಷ್ಟಿದೆ ಎಂಬುದು ತಿಳಿಯುತ್ತದೆ" ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಮ್ಮ ಬಗ್ಗೆ ಟೀಕೆ ಮಾಡುತ್ತಾ ಇರುತ್ತಾರೆ. ಆದರೆ, ಮುಂದಿನ ಸಿಎಂ ಯಾರು ಎಂದು ಅವರೇ ಕಿತ್ತಾಡುತ್ತಿದ್ದಾರೆ. ಈಗ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲ" ಎಂದಿದ್ದಾರೆ.
"ಡಿಕೆಶಿ ಹಾಗೂ ಸಿದ್ದರಾಮಯ್ಯ ನಾವೆಲ್ಲ ಒಂದೇ ಎಂದಿದ್ದರು ಈಗ ಸಿಎಂ ಸ್ಥಾನಕ್ಕಾಗಿ ಗುದ್ದಾಟ ನಡೆಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ನ ಹಣೆಬರಹ ಇಷ್ಟೇ ಎಂದು ತಿಳಿಯುತ್ತದೆ" ಎಂದು ವ್ಯಂಗ್ಯವಾಡಿದ್ದಾರೆ.
"ಕೊರೊನಾದ ಈ ಸಂಕಷ್ಟದ ವೇಳೆ ಕಾಂಗ್ರೆಸ್ಸಿಗರು ಜನಪರ ಕಾಳಜಿ ಮಾಡಬೇಕಿತ್ತು. ಬದಲಾಗಿ ಅವರು ರಾಜಕೀಯ ಮಾಡುತ್ತಿದ್ದಾರೆ" ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಬಿಜೆಪಿಗೆ ರಾಜೀನಾಮೆ ನೀಡುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಯೋಗ ದಿನಾಚರಣೆ ಬ್ಯಾನರ್ನಲ್ಲಿ ಭಾವಚಿತ್ರ ಕೈಬಿಟ್ಟ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಇದೆಲ್ಲಾ ಸಣ್ಣ-ಸಣ್ಣ ವಿಚಾರ. ಇದನ್ನು ಏಕೆ ಕೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.