ಧಾರವಾಡ, ಜೂ 23 (DaijiworldNews/PY): "ಕೊರೊನಾದಿಂದ ಪೋಷಕರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳ ಬ್ಯಾಂಕ್ ಖಾತೆಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಪ್ರತಿ ತಿಂಗಳು 3,500 ರೂ. ಅನ್ನು ಜಮೆ ಮಾಡಲಾಗುವುದು" ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಕಮಲಾಪುರದಲ್ಲಿ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಇಬ್ಬರು ಮಕ್ಕಳನ್ನು ಭೇಟಿ ಮಾಡಿ ಅವರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಮೂರು ಮಕ್ಕಳು ಕೊರೊನಾದಿಂದ ಪೋಷಕರನ್ನು ಕಳೆದುಕೊಂಡಿದ್ದಾರೆ. ಮಕ್ಕಳ ಕಲ್ಯಾಣ ನಿಟ್ಟಿನಲ್ಲಿ ಸಿಎಂ ಅವರು, ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕೊರೊನಾದಿಂದ ಪೋಷಕರನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಗಂಡುವಿಗೆ ಎಸ್ಸೆಸ್ಸೆಲ್ಸಿ ನಂತರ ಉಚಿತ ಲ್ಯಾಪ್ಟಾಪ್, ಹೆಣ್ಣು ಮಗುವಿಗೆ ಉನ್ನತ ವ್ಯಾಸಂಗಕ್ಕಾಗಿ 1 ಲಕ್ಷ ರೂ. ನೀಡುವಂತ ಯೋಜನೆಯನ್ನು ಜಾರಿಗೆ ತರಲಾಗಿದೆ" ಎಂದಿದ್ದಾರೆ.
"ಇನ್ನು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದ ಕೂಡಾ ಬಾಲ ಸ್ರಾಜ್ ಎನ್ನುವ ಯೋಜನೆಯನ್ನು ಜಾರಿಗೆ ತರಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳು, ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಗುರುತಿಸಿ ವೆಬ್ಸೈಟ್ನಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಮಕ್ಕಳ ಮೇಲೆ ಕೊರೊನಾದ ಮೂರನೇ ಅಲೆ ಪ್ರಭಾವ ಬೀರಬಹುದು ಎನ್ನು ಕಾರಣದಿಂದ ಈಗಿಂದಲೇ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದೆ. ಪ್ರತೀ ತಾಲೂಕಿನಲ್ಲಿನ ಹಾಸ್ಟೆಲ್ಗಳನ್ನು ಗುರುತಿಸಿಅಲ್ಲಿ ಕ್ವಾರಂಟೈನ್ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಆ ಕ್ವಾರಂಟೈನ್ನಲ್ಲಿ ತಾಯಿ-ಮಗು ಇರಬಹುದಾಗಿದೆ. 18 ವರ್ಷದೊಳಗಿನ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕವಾದ ಕ್ವಾರಂಟೈನ್ ಕೇಂದ್ರ ತೆರೆಯಲಾಗುತ್ತಿದೆ. ಅವರಿಗೆ ಪೌಷ್ಟಿಕ ಆಹಾರದೊಂದಿಗೆ ಎಲ್ಲಾ ರೀತಿಯಾದ ಸೌಲಭ್ಯ ಒದಗಿಸಲಾಗುವುದು" ಎಂದು ತಿಳಿಸಿದ್ದಾರೆ.