ಕೊಚ್ಚಿ, ಜೂ 23 (DaijiworldNews/MS): ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಾಂಸದ ಬಳಕೆ ಮತ್ತು ದ್ವೀಪದ ಡೈರಿ ಫಾರಂ ಮುಚ್ಚುವ ಲಕ್ಷದ್ವೀಪ ಆಡಳಿತದ ಆದೇಶಕ್ಕೆ ಕೇರಳ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.
ಆಡಳಿತಾತ್ಮಕ ಬದಲಾವಣೆಗಳ ವಿರುದ್ಧ ಕವರಟ್ಟಿ ದ್ವೀಪದ ವಕೀಲ ಅಜ್ಮಲ್ ಅಹ್ಮದ್ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಜಾರಿಗೊಳಿಸಿತು.
ಹೊಸ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಬೆಂಗಳೂರಿನ 'ಅಕ್ಷಯ ಪಾತ್ರಾ' ಹೆಸರಿನ ಎನ್ಜಿಒಗೆ ವಹಿಸಲು ಯೋಜಿಸುತ್ತಿದ್ದಾರೆ.ಹೊಸ ಮೆನು ಜಾರಿಗೆ ಬಂದ ಬಳಿಕ ಬಿಸಿಯೂಟ ತಯಾರಿಸುತ್ತಿದ್ದ 105 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. 1950ರಿಂದಲೂ ಲಕ್ಷದ್ವೀಪ, ಪೂರ್ವ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತದ ಮಕ್ಕಳಿಗೆ ಮಧ್ಯಾಹ್ನ ಬೇಯಿಸಿದ ಮಾಂಸ ಮತ್ತಿತರ ಆಹಾರವನ್ನು ನೀಡುತ್ತಾ ಬಂದಿದೆ. ಇದೀಗ ಬಿಸಿಯೂಟ ಯೋಜನೆಯನ್ನು ಎನ್ಜಿಒ ಒಂದಕ್ಕೆ ವಹಿಸುವ ಪ್ರಸ್ತಾಪ ಕಾನೂನುಬಾಹಿರ ಮತ್ತು ಖಂಡನೀಯ ಎಂದು ಅರ್ಜಿದಾರರು ವಾದಿಸಿದ್ದಾರೆ.
ನ್ಯಾಯಾಲಯ, ಸಾಂಪ್ರದಾಯಿಕ ಆಹಾರ ಪದ್ದತಿ ಅಡ್ಡಿಪಡಿದ ಹಾಗೂ ಬಿಸಿಯೂಟದ ಮೆನು ಬದಲಿಸಿರುವ ಹೊಸ ಆಡಳಿತಾಧಿಕಾರಿ ನಿರ್ಧಾರವನ್ನು ಪ್ರಶ್ನಿಸಿದ್ದು ಇದಕ್ಕೆ ಉತ್ತರವಾಗಿ ಮಾಂಸ ಶೇಖರಣೆಗೆ ಸೌಲಭ್ಯದ ಕೊರತೆ ಇದೆ ಹಾಗೂ ಲಾಭದಾಯಕವಲ್ಲದ ಕಾರಣ ಡೈರಿ ಫಾರಂಗಳನ್ನು ಮುಚ್ಚಲಾಗಿದೆ” ಎಂದು ಹೇಳಲಾಯಿತು.
ಈ ವೇಳೆ ಅರ್ಜಿದಾರರ ವಾದವನ್ನು ಮನ್ನಿಸಿದ ನ್ಯಾಯಾಲಯ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಾಂಸದ ಬಳಕೆ ಮತ್ತು ದ್ವೀಪದ ಡೈರಿ ಫಾರಂ ಮುಚ್ಚುವ ಲಕ್ಷದ್ವೀಪ ಆಡಳಿತದ ಆದೇಶಕ್ಕೆ ಕೇರಳ ಹೈಕೋರ್ಟ್ ಮಧ್ಯಂತರ ತಡೆ ನೀಡಿತು.