ಶ್ರೀನಗರ, ಜೂ 23 (DaijiworldNews/PY): ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಸಿಐಡಿ ಇನ್ಸ್ಪೆಕ್ಟರ್ವೋರ್ವರು ಮೃತಪಟ್ಟ ಘಟನೆ ಶ್ರೀನಗರದ ನೌಗಮ್ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು ಜಮ್ಮು-ಕಾಶ್ಮೀರ ಪೊಲೀಸ್ ಅಪರಾಧ ತನಿಖಾ ವಿಭಾಗದ (ಸಿಐಡಿ) ಇನ್ಸ್ಪೆಕ್ಟರ್ ಪರ್ವೇಜ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.
ನೌಗಮ್ನ ಕನಿಪೋರಾ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪರ್ವೇಜ್ ಅಹ್ಮದ್ ದಾರ್ ಅವರನ್ನು ಪೆರಿಂಪೋರಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ದುಷ್ಕರ್ಮಿಗಳನ್ನು ಭಯೋತ್ಪಾದಕರೆಂದು ಶಂಕಿಸಲಾಗಿದೆ.