ಬೆಂಗಳೂರು,ಜೂ 22 (DaijiworldNews/MS): ರಾಜ್ಯದ 20,713 ಕಲಾವಿದರಿಗೆ ತಲಾ 3,000 ರೂ.ಗಳ ಕೋವಿಡ್ ನಗದು ಪರಿಹಾರ ನೀಡುವ ಯೋಜನೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ 2ನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ 3,000 ರೂ.ಗಳ ಆರ್ಥಿಕ ನೆರವು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ಡಿ.ಬಿ.ಟಿ. ಮೂಲಕ ಒಟ್ಟು 6.23 ಕೋಟಿ ರೂ. ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಮೊದಲ ಅಲೆಯಲ್ಲೂ ಕಲಾವಿದರಿಗೆ ಸರ್ಕಾರವು ಹಣಕಾಸಿನ ಪರಿಹಾರವನ್ನು ಮಂಜೂರು ಮಾಡಿತ್ತು. ಈ ಬಾರಿಯೂ ಸರಿಯಾದ ಪರಿಶೀಲನೆಯ ನಂತರ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಆಹ್ವಾನಿಸುವ ಮೂಲಕ ಪರಿಹಾರದ ಮೊತ್ತವನ್ನು ಪಾರದರ್ಶಕವಾಗಿ ವಿತರಿಸಲು ಅನುಮೋದನೆ ನೀಡಲಾಗಿದೆ ಮತ್ತು ಎಲ್ಲಾ ನೋಂದಾಯಿತ ಫಲಾನುಭವಿಗಳು ಹಣ ತಲುಪಿದ್ದರೆ ಅಥವಾ ಇಲ್ಲದಿದ್ದರೆ ಅವರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬಹುದು ಎಂದು ಅವರು ಹೇಳಿದರು.
ಕೋವಿಡ್-19ರ 2ನೇ ಅಲೆಯಿಂದ ಸಂಕಷ್ಟಕ್ಕೀಡಾದ ದುರ್ಬಲ ವರ್ಗದವರಿಗೆ ಒಟ್ಟು 2,050 ಕೋಟಿ ರೂ.ಗಳಿಗೂ ಅಕ ಮೊತ್ತದ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಿದ್ದು, ಈಗಾಗಲೇ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳು ಮೊದಲಾದವರಿಗೆ ಡಿ.ಬಿ.ಟಿ. ಮೂಲಕ ಆರ್ಥಿಕ ನೆರವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗಿದೆ.
ಫಲಾನುಭವಿಗಳು ಡಿ.ಬಿ.ಟಿ. ಆಪ್ ಮುಖಾಂತರ ತಮ್ಮ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ನೆರವು ವರ್ಗಾವಣೆ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದೀಗ ವಿವಿಧ ಜಿಲ್ಲೆಗಳಲ್ಲಿ ನಿರ್ಬಂದಗಳನ್ನು ತೆರವು ಗೊಳಿಸಲಾಗಿದೆ. ಆದರೆ ಕಲಾವಿದರು ಮುನ್ನೆಚ್ಚರಿಕೆಯ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಜೊತೆಗೆ ಲಸಿಕೆಯನ್ನು ಸಹ ಸರ್ಕಾರ ಉಚಿತವಾಗಿ ನೀಡುತ್ತಿದ್ದು, ತಪ್ಪದೆ ಹಾಕಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಮೊದಲ ಅಲೆಯ ಸಂದರ್ಭದಲ್ಲಿಯೂ 17 ಸಾವಿರಕ್ಕೂ ಹೆಚ್ಚು ಕಲಾವಿದರಿಗೆ ನೆರವು ನೀಡಲಾಗಿತ್ತು. ಈಗ ಮತ್ತೆ ಕಲಾವಿದರಿಗೆ ತಲಾ 3 ಸಾವಿರ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ರವಿಶಂಕರ್, ನಿರ್ದೇಶಕ ಎಸ್. ರಂಗಪ್ಪ, ಮೊದಲಾದವರು ಇದ್ದರು.