ನವದೆಹಲಿ, ಜೂ.22 (DaijiworldNews/HR): ಕೊರೊನಾ ನಿರ್ವಹಣೆಯ ಬಗ್ಗೆ ಶ್ವೇತಪತ್ರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದು,ಕೊರೊನಾ ಸೋಂಕಿನ ಸಂಭಾವ್ಯ ಮೂರನೇ ಅಲೆಗೆ ಸಿದ್ಧರಾಗಲು ದೇಶಕ್ಕೆ ಸಹಾಯ ಮಾಡುವುದು ಅದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾದ ಮೂರನೇ ಅಲೆ ಬರುತ್ತಿದೆ ಎಂದು ಇಡೀ ದೇಶಕ್ಕೆ ತಿಳಿದಿದ್ದು, ಅದಕ್ಕೆ ಸಿದ್ಧರಾಗುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ" ಎಂದರು.
"ದೇಶದಲ್ಲಿ ಮೊದಲ ಮತ್ತು ಎರಡನೆಯ ಅಲೆಯು ತುಂಬಾ ಹಾನಿಕಾರಕ ಎಂಬುದು ಸ್ಪಷ್ಟವಾಗಿದ್ದು, ಇದು ಏಕೆ ವಿನಾಶಕಾರಿಯಾಗಿದೆ ಎಂಬುದಕ್ಕೆ ಕೆಲವು ಕಾರಣಗಳಿವೆ, ನಾವು ಆ ಕಾರಣಗಳನ್ನು ನಮ್ಮ ಶ್ವೇತಪತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇವೆ" ಎಂದಿದ್ದಾರೆ.
ಇನ್ನು ಕೊರೊನಾದ ವಿರುದ್ಧ ಹೋರಾಡುವುದಕ್ಕೆ ನಮ್ಮಲ್ಲಿರುವ ಏಕೈಕ ಪ್ರಮುಖ ಅಸ್ತ್ರ ಎಂದರೆ ಅದು ಕೊರೊನಾ ಲಸಿಕೆ. ನಾವು ಸಾಧ್ಯವಾದಷ್ಟು ಬೇಗ ಶೇಕಡಾ 100 ರಷ್ಟು ವ್ಯಾಕ್ಸಿನೇಷನ್ ಪೂರೈಸಬೇಕು. ಕೊರೊನಾ ಲಸಿಕೆ ಹಂಚಿಕೆಯಲ್ಲಿ ಯಾವುದೇ ಪಕ್ಷಪಾತ ಇರಬಾರದು ಮತ್ತು ಅವುಗಳನ್ನು ಬಿಜೆಪಿ ಅಥವಾ ವಿರೋಧ ರಾಜ್ಯಗಳಾಗಿ ನೋಡಬಾರದು" ಎಂದು ಸಲಹೆ ನೀಡಿದ್ದಾರೆ.
ಕೊರೊನಾ ನಿರ್ವಹಣೆಯಲ್ಲಿ ಏನು ತಪ್ಪಾಗಿದೆ ಎಂಬುದರ ಕುರಿತು ಸರ್ಕಾರಕ್ಕೆ ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುವ ಉದ್ದೇಶದಿಂದ ಈ ಶ್ವೇತಪತ್ರವನ್ನು ಬಿಡುಗಡೆಗಡೆ ಮಾಡಲಾಗಿದ್ದು, ಇದು ರಾಷ್ಟ್ರದ ಮೂರನೇ ಅಲೆಗೆ ಸಿದ್ಧವಾಗಲು ಸಹಾಯ ಮಾಡಬಹುದು" ಎಂದು ಹೇಳಿದ್ಡಾರೆ.