ಲಕ್ನೋ, ಜೂ 22 (DaijiworldNews/MS): ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಕಬ್ಬಿನ ಗದ್ದೆಯೊಂದರಲ್ಲಿ ಎಂಟು ವರ್ಷದ ಬಾಲಕಿಯ ಮೃತದೇಹ ಕತ್ತು ಹಿಸುಕಿ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಾಲಕಿಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿದ್ದು, ಮೈಮೇಲೆ ಗಾಯಗಳಿದ್ದು, ಅಕೆ ಧರಿಸಿದ ಉಡುಪಿನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದ್ದು ಇದರ ಆಧಾರದಲ್ಲಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಪ್ರಾಥಮಿಕ ತನಿಖೆಯಿಂದ ಭಾನುವಾರ ಮಧ್ಯಾಹ್ನ ಬಾಲಕಿ ತನ್ನ ಅಜ್ಜಿಯೊಂದಿಗೆ ಆಡುಗಳನ್ನು ಮೇಯಿಸಲು ಗ್ರಾಮದ ಪಶ್ಚಿಮ ಭಾಗಕ್ಕೆ ಬೆಳಗ್ಗೆ ಹೋಗಿದ್ದು . ಮಧ್ಯಾಹ್ನದ ವೇಳೆ ದಣಿವಾಗಿದ್ದರಿಂದ ಮನೆಗೆ ಹಿಂತಿರುವುದಾಗಿ ತಿಳಿಸಿದ್ದಾಳೆ. ಅಜ್ಜಿ ಸಂಜೆ ಮನೆಗೆ ತಲುಪಿದಾಗ ಬಾಲಕಿ ಮನೆ ತಲುಪದಿರುವ ವಿಚಾರ ಬೆಳಕಿಗೆ ಬಂದಿದೆ. ತಕ್ಷಣ ಕುಟುಂಬ ಸದಸ್ಯರು ನೆರೆಹೊರೆಯವರು ಬಾಲಕಿಯನ್ನು ಹುಡುಕಿದರೂ ಪತ್ತೆಯಾಗಿರಲಿಲ್ಲ.
ಗ್ರಾಮಸ್ಥರೆಲ್ಲರೂ ಸೇರಿ ಹುಡುಕಲಾರಂಭಿಸಿದಾಗ ರಾತ್ರಿ ವೇಳೆಗೆ ಬಾಲಕಿಯ ರಕ್ತಸಿಕ್ತವಾಗಿರುವ ಮೃತದೇಹ ಕಬ್ಬಿಣದ ಗದ್ದೆಯಲ್ಲಿ ಪತ್ತೆಯಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವೈದ್ಯಕೀಯ ವರದಿ ಬಳಿಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಸ್ಪಷ್ಟವಾಗಬಹುದು ಪೊಲೀಸ್ ಅಧಿಕಾರಿ ಆದರ್ಶ್ ಕುಮಾರ್ ಸಿಂಗ್ ನೇತೃತ್ವದ ತಂಡ ತಿಳಿಸಿದೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಾಲಕಿಯ ಕುಟುಂಬಕ್ಕೆ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.