ಬೆಂಗಳೂರು, ಜೂ 22 (DaijiworldNews/MS): ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ಯಾವುದೇ ತರಾತುರಿ ಇಲ್ಲ, ಯಾಕೆಂದರೆ ವಿದ್ಯಾರ್ಥಿಗಳ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಅವರು ಮಾದ್ಯಮದೊಂದಿಗೆ ಮಾತನಾಡಿದ ಅವರು, ಒಂದೆಡೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಬೇಕೆಂಬ ಬೇಡಿಕೆಯೂ ಇದೆ, ಮತ್ತೊಂದೆಡೆ ಪೋಷಕರು ಸದ್ಯದ ಸ್ಥಿತಿಯನ್ನೇ ಮುಂದುವರಿಸಿ ಎಂದು ಹೇಳುತ್ತಿದ್ದಾರೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾಕೆಂದರೆ ಮಕ್ಕಳ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆರೋಗ್ಯ ಕೂಡಾ. ಮಕ್ಕಳಿಗೆ ಸೋಂಕು ಬೇಗ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಾವು ಏನೇ ನಿರ್ಧಾರ ಕೈಗೊಳ್ಳುವ ಮುನ್ನ ಹತ್ತಾರು ಬಾರಿ ಯೋಚಿಸಬೇಕು. ಮಕ್ಕಳ ಸುರಕ್ಷತೆ ಮುಖ್ಯವಾಗಿರುವುದರಿಂದ ಯಾವುದೇ ಒತ್ತಡಕ್ಕೆ ಮಣಿದು ಶಾಲಾ ಕಾಲೇಜುಗಳನ್ನು ಪ್ರಾರಂಭಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ರಾಜ್ಯದ ಸ್ಥಿತಿಗತಿ, ಕೋವಿಡ್ ಸೋಂಕಿನ ಪ್ರಮಾಣ, ಪ್ರತಿಯೊಂದು ಲೆಕ್ಕಾಚಾರ ಹಾಕಿಯೇ ತೀರ್ಮಾನ ಮಾಡಬೇಕಾಗುತ್ತದೆ. ತಜ್ಞರ ಸಮಿತಿ ನೀಡುವ ಆಧಾರದ ಮೇಲೆ ಇವೆಲ್ಲವೂ ನಿರ್ಧಾರವಾಗುತ್ತದೆ. ಮಕ್ಕಳ ಭವಿಷ್ಯದ ಜೊತೆಗೆ ಆರೋಗ್ಯದ ಸುರಕ್ಷತೆಯನ್ನು ಸಹ ಗಮನದಲ್ಲಿಟ್ಟುಕೊಂಡೇ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ನಡೆಯಬೇಕು. ಕೆಲವು ಸೂಕ್ಷ್ಮ ವಿಚಾರಗಳಲ್ಲಿ ಏಕಾಏಕಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರತಿ 14 ದಿನಗಳಿಗೊಮ್ಮೆ ತಾಂತ್ರಿಕ ಸಲಹಾ ಸಮಿತಿ ಹಾಗೂ ಅಧಿಕಾರಿಗಳು ಸಭೆ ನಡೆಸುತ್ತಾರೆ. ಅವರು ಕಾಲಕಾಲಕ್ಕೆ ಸರ್ಕಾರಕ್ಕೆ ವರದಿಯನ್ನು ನೀಡುತ್ತಾರೆ. ಆ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವಿವರಿಸಿದ್ದಾರೆ.