ಬೆಂಗಳೂರು, ಜೂ.22 (DaijiworldNews/HR): "ಇಂದಿರಾ ಕ್ಯಾಂಟೀನ್ಗಳಲ್ಲಿ ಈಗ ನೀಡುತ್ತಿರುವ ಉಚಿತ ಆಹಾರವನ್ನು ಮುಂದಿನ ಆರು ತಿಂಗಳವರೆಗೆ ಮುಂದುವರೆಸಿಕೊಂಡು ಹೋಗಬೇಕು ಮತ್ತು ಹೆಚ್ಚಿನ ಬೇಡಿಕೆಯಿರುವ ಕಡೆ ಹೆಚ್ಚುವರಿ ಸಂಚಾರಿ ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಪೂರೈಕೆ ಮಾಡಬೇಕು" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಬಡಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕು ಎಂಬುದು ಇಂದಿರಾ ಕ್ಯಾಂಟೀನ್ ಯೋಜನೆಯ ಹಾಗೂ ನಮ್ಮ ಸರ್ಕಾರದ ಮೂಲ ಉದ್ದೇಶವಾಗಿತ್ತು. ಆದರೆ ಈಗಿನ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಈ ಕ್ಯಾಂಟೀನ್ ಗಳಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರು ಇಡಲಾಗಿದೆ ಎಂಬ ಏಕೈಕ ಕಾರಣಕ್ಕೆ ಅನುದಾನ ಬಿಡುಗಡೆ ಮಾಡದೆ, ಮುಚ್ಚಲು ಹೊರಟಿತ್ತು" ಎಂದರು.
ಇನ್ನು "ಕಳೆದೆರಡು ತಿಂಗಳುಗಳ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡಜನರ ಹಸಿವು ನೀಗಿಸಲು ನೆರವಾದದ್ದು ನಮ್ಮ ಸರ್ಕಾರದ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ. ಲಾಕ್ಡೌನ್ ಇರುವ ಕಾರಣ ಸರ್ಕಾರ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿತ್ತು" ಎಂದಿದ್ದಾರೆ.
"ಈಗ ಲಾಕ್ ಡೌನ್ ತೆರವಾಗಿರುವ ಕಾರಣ ರಾಜ್ಯ ಸರ್ಕಾರ ಹಿಂದಿನಂತೆ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡದೆ, ಬೀಗ ಹಾಕಬೇಕಾದ ಸ್ಥಿತಿಗೆ ತಳ್ಳಲಿದೆ. ಈ ಬಗ್ಗೆ ಜನ ಜಾಗೃತರಾಗಬೇಕು. ಇಂಥದ್ದೊಂದು ಜನಪರವಾದ ಯೋಜನೆ ನಿಲ್ಲದಂತೆ ಜನರೇ ಸರ್ಕಾರದ ಕಿವಿಹಿಂಡುವ ಕೆಲಸ ಮಾಡಬೇಕು" ಎಂದು ಹೇಳಿದದಾರೆ.