ನವದೆಹಲಿ, ಜೂ 22 (DaijiworldNews/MS): ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಅಯೋಧ್ಯೆಯ ಹೆಸರಿನಲ್ಲಿ ಅಕ್ರಮ ವೆಬ್ಸೈಟ್ ಮಾಡಿದ ಮತ್ತು ರಾಮ್ ದೇವಾಲಯ ನಿರ್ಮಾಣದ ನೆಪದಲ್ಲಿ ದೇಣಿಗೆ ಸ್ವೀಕರಿಸುವ ಮೂಲಕ ಲಕ್ಷಾಂತರ ರೂಪಾಯಿ ಪಡೆದು ಜನರನ್ನು ವಂಚಿಸಿದ ಐದು ಜನರನ್ನು ಸೋಮವಾರ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನೋಯ್ಡಾ ಸೈಬರ್ ಪೊಲೀಸ್ ಠಾಣೆ ಮತ್ತು ಲಕ್ನೋ ಸೈಬರ್ ಅಪರಾಧ ಕೇಂದ್ರದ ಜಂಟಿ ತಂಡ ಬಂಧಿಸಿದೆ.
ಸಾಂಧರ್ಭಿಕ ಚಿತ್ರ
"ಅಯೋಧ್ಯೆಯಲ್ಲಿ ಶ್ರೀರಾಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾದ ಬೆನ್ನಲ್ಲೇ ದೇಶಾದ್ಯಂತ ದೇಣಿಗೆ ಸಂಗ್ರಹವೂ ನಡೆಯುತ್ತಿದೆ. ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕೃತವಾಗಿಯೇ ದೇಣಿಗೆ ಸಂಗ್ರಹ ಮಾಡುತ್ತಿದೆ. ಇದನ್ನು ಬಂಡವಾಳ ಮಾಡಿಕೊಂಡ ಆರೋಪಿಗಳು ಶ್ರೀ ರಾಮ್ ಜನ್ಮಭೂಮಿ ಟ್ರಸ್ಟ್ ಅಯೋಧ್ಯೆಯ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ಸ್ವಯಂಪ್ರೇರಿತರಾಗಿ ಕೊಡುಗೆ ನೀಡುವ ದಾನಿಗಳಿಂದ ಅಕ್ರಮವಾಗಿ ಹಣ ಸಂಗ್ರಹಣೆ ಮಾಡುತ್ತಿದ್ದರು. ಇದಕ್ಕಾಗಿ ವೆಬ್ಸೈಟ್ನಲ್ಲಿ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಕಿದ್ದರು. ಇದೇ ನೈಜವಾದ ಟ್ರಸ್ಟ್ ನ ವೆಬ್ ಸೈಟ್ ಎಂದು ಅನೇಕರು ದೇಣಿಗೆ ನೀಡಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಆಶಿಶ್ ಗುಪ್ತಾ (21), ನವೀನ್ ಕುಮಾರ್ ಸಿಂಗ್ (26), ಸುಮಿತ್ ಕುಮಾರ್ (22), ಅಮಿತ್ ಶಾ (24) ಮತ್ತು ಸೂರಜ್ ಗುಪ್ತಾ (22) ಎಂದು ಗುರುತಿಸಲಾಗಿದೆ.
ಇನ್ನು ಇವರಲ್ಲಿ ಮೂವರು ಅಮೇಠಿಯವರು ಮತ್ತು ಇಬ್ಬರು ಬಿಹಾರದ ಸೀತಾಮಾರ್ಹಿಯವರು. ಇವರೆಲ್ಲರೂ ದೆಹಲಿಯ ನ್ಯೂ ಅಶೋಕ ನಗರದಲ್ಲಿ ವಾಸವಾಗಿದ್ದರು ಎಂದೂ ಹೇಳಿದ್ದಾರೆ. ಆರೋಪಿಗಳ ಬಳಿಯಿದ್ದ ಮೊಬೈಲ್, ಲ್ಯಾಪ್ಟಾಪ್, 50 ಫೋಟೋ ಕಾಪಿಗಳು, ಆಧಾರ್ ಕಾರ್ಡ್ ಸೇರಿ ಮಹತ್ವದ ವಸ್ತುಗಳನ್ನೆಲ್ಲ ಪೊಲೀಸರು ವಶಪಡಿಸಿದ್ದಾರೆ.