ಬೆಂಗಳೂರು, ಜೂ 22 (DaijiworldNews/MS): ಮಂಗಳೂರಿನಲ್ಲಿ ಘನತ್ಯಾಜ್ಯ ಘಟಕ ಕುಸಿತ ದುರ್ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶಗಳನ್ನು ಪಾಲಿಸದ ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ್ದು, ಈ ವೇಳೆ ಪಾಲಿಕೆಯ ವೈಫಲ್ಯದ ಕುರಿತು ಪ್ರಸ್ತಾಪಿಸಿದ ಪೀಠ, ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತಜ್ಞರ ಸಂಸ್ಥೆ ಎನ್ಐಟಿಕೆ ಸುರತ್ಕಲ್ ಸಲ್ಲಿಸಿರುವ 3 ವರದಿಗಳಲ್ಲೂ ಪಾಲಿಕೆಯ ವೈಫಲ್ಯ ಎತ್ತಿ ಹಿಡಿಯಲಾಗಿದೆ. ಆದರೆ, ಅವುಗಳನ್ನು ತಿದ್ದಿಕೊಳ್ಳಲು ಪಾಲಿಕೆ ಗಂಭೀರ ಕ್ರಮಗಳನ್ನೇ ಕೈಗೊಂಡಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿತು.
ಹಾಗೆಯೇ, ಪಾಲಿಕೆ ನ್ಯಾಯಾಲಯದ ಆದೇಶಗಳಿಗೂ ಬೆಲೆ ನೀಡಿಲ್ಲ. ಪೀಠದ ನಿರ್ದೇಶನಗಳನ್ನು ಪಾಲಿಸುವಲ್ಲಿ ಹಾಗೂ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಅನುಸರಿಸುವಲ್ಲಿ ನಿರ್ಲಕ್ಷ್ಯವಹಿಸುತ್ತಿರುವ ಪಾಲಿಕೆಯ ನಡವಳಿಕೆಯನ್ನು ಸರಕಾರ ಮೂಕ ಪ್ರೇಕ್ಷಕನಂತೆ ನೋಡುತ್ತಾ ಕುಳಿತು ಕೊಳ್ಳಬಾರದು. ತನ್ನ ಅಧಿಕಾರ ಬಳಸಿ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಂಡು ಜುಲೈ 8ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಏಪ್ರಿಲ್ನಲ್ಲಿ ಅಗ್ನಿ ದುರಂತ ಸಂಭವಿಸಿದರೂ ಮತ್ತೆ ಅಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಂಡಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಈ ವೇಳೆ, ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿ, ಮೂರು ವರದಿಗಳನ್ನು ಆಧರಿಸಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರೂ ಪೀಠ ಒಪ್ಪಲಿಲ್ಲ.
ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿ, ಕೇಂದ್ರ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎರಡೂ ವರದಿಗಳಲ್ಲೂ ಪಾಲಿಕೆಯ ಲೋಪಗಳನ್ನು ಎತ್ತಿ ತೋರಿಸಲಾಗಿದೆ. ಆದರೆ, ಪಾಲಿಕೆ ಏನೂ ಕ್ರಮಕೈಗೊಂಡಿಲ್ಲ.
ಮುಖ್ಯವಾಗಿ ಕಟ್ಟಡ ನಿರ್ಮಾಣ ತ್ಯಾಜ್ಯ ಹೆಚ್ಚಾಗುತ್ತಿದೆ. ಅದರ ವಿಲೇವಾರಿಗೂ ಕ್ರಮಕೈಗೊಂಡಿಲ್ಲ ಎಂದು ವಿವರಿಸಿದರು.ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾಗಿರುವ ಅನಾಹುತಗಳ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಹೈಕೋರ್ಟ್ ಮಂಗಳೂರು ಮಹಾನಗರ ಪಾಲಿಕೆಗೆ ಹಲವು ನಿರ್ದೇಶನಗಳನ್ನು ನೀಡಿದೆ.ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವುದು, 2016ರ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಸೇರಿ ಹಲವು ನಿರ್ದೇಶನಗಳನ್ನು ನೀಡಿದೆ. ಆದರೆ, ಪಾಲಿಕೆ ಅವುಗಳನ್ನು ಪಾಲಿಸಿಲ್ಲ. ಹೀಗಾಗಿಯೇ, ಹಿಂದಿನ ವಿಚಾರಣೆ ವೇಳೆ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕು ಎಂದು ಸೂಚಿಸಿತ್ತು.