ನವದೆಹಲಿ, ಜೂ. 21 (DaijiworldNews/SM): ದೇಶದಲ್ಲಿ ಪ್ರಸ್ತುತ ಲಸಿಕೆ ವಿತರಣೆ ಚುರುಕುಗೊಂಡಿದ್ದು ಬಹುತೇಕ ಜನರು ಲಸಿಕೆ ಪಡೆಯುತ್ತಿದ್ದಾರೆ. ಈ ನಡುವೆ ದಾಖಲೆಯ ಸಂಖ್ಯೆಯ ಕೋವಿಡ್ ಲಸಿಕೆ ಡೋಸ್ ಗಳನ್ನು ಸೋಮವಾರ ದೇಶದ ಜನತೆಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.
ಪರಿಷ್ಕೃತ ಲಸಿಕೆ ಮಾರ್ಗಸೂಚಿಗಳು ಜಾರಿಗೆ ಬಂದ ಮೊದಲ ದಿನ ಸೋಮವಾರ ಸಂಜೆ ತನಕ 80 ಲಕ್ಷ ಡೋಸ್ಗಳನ್ನು ವಿತರಿಸಲಾಗಿದೆ. ದಾಖಲೆ ಮುರಿದಿರುವ ಲಸಿಕೆ ಅಭಿಯಾನದ ಸಂಖ್ಯೆಯು ಸಂತಸ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕೋವಿಡ್-19ರ ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ. ಲಸಿಕೆ ಪಡೆದ ಎಲ್ಲಾ ಮುಂಚೂಣಿಯ ವಾರಿಯರ್ಸ್ ಗಳಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಹಿಂದಿನ ಗರಿಷ್ಟ ಲಸಿಕೆ ವಿತರಣೆ ಏಪ್ರಿಲ್ 1 ರಂದು 48 ಲಕ್ಷ ಡೋಸ್ ಆಗಿದೆ.
ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಕೇಂದ್ರವು ಉಚಿತವಾಗಿ ನೀಡುವ ಲಸಿಕೆ ಪ್ರಮಾಣವನ್ನು ಜನಸಂಖ್ಯೆ, ರೋಗದ ಪ್ರಮಾಣ ಮತ್ತು ಲಸಿಕೆ ಅಭಿಯಾನ ಪ್ರಗತಿಯಂತಹ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಹಂಚಲಾಗುತ್ತದೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಉಚಿತ ಲಸಿಕೆಗೆ ಅರ್ಹರಾಗಿದ್ದಾರೆ.